ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಡುಪಿ ಮಠದಲ್ಲಿ ಸಾವಿರಾರು ಭಕ್ತರಿಗೆ 'ತಪ್ತಮುದ್ರೆ'

Lingaraj Badiger
Updated On : 20 Jul 2013, 12:15 pm

ಉಡುಪಿ: ಉಡುಪಿ ಕೃಷ್ಣ ಮಠ ಹಾಗೂ ಇತರ ಮಠಗಳಲ್ಲಿ ಶುಕ್ರವಾರ ತಪ್ತ ಮುದ್ರಾಧಾರಣೆ ನಡೆಯಿತು.
 ಪ್ರತಿ ವರ್ಷ ಸಂಪ್ರದಾಯದಂತೆ ಆಷಾಢದ ಪ್ರಥಮ ಏಕಾದಶಿಯಂದು ನಡೆಯುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಮಠಾಧೀಶರಿಂದ ತಪ್ತ (ಬಿಸಿ) ಮುದ್ರೆಗಳನ್ನು ಹಾಕಿಸಿಕೊಂಡರು.
ಸರತಿ ಸಾಲು: ಕೃಷ್ಣ ಮಠದಲ್ಲಿ ಪರ್ಯಾಯ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಮತ್ತು ಶಿರೂರು ಮಠದಲ್ಲಿ ಶ್ರೀ ಲಕ್ಷ್ಮೀವರ ತೀರ್ಥರು ಭಕ್ತಾಭಿಮಾನಿಗಳಿಗೆ ಮುದ್ರಾಧಾರಣೆ ನಡೆಸಿಕೊಟ್ಟರು.
 ಮಹಿಳೆಯರು, ಮಕ್ಕಳು ವಯೋವೃದ್ಧರು ಎನ್ನದೇ ಸರತಿ ಸಾಲಿನಲ್ಲಿ ನಿಂತು ಎಲ್ಲರೂ ಮುದ್ರೆ ಹಾಕಿಸಿಕೊಂಡರು.
ಏನಿದು ಮುದ್ರೆ...?: ಲೋಹದ ಶಂಖ, ಚಕ್ರ ಇತ್ಯಾದಿ ರುಪಾಯಿಗಲದ ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ಅವುಗಳನ್ನು ತೋಳು, ಎದೆಯ ಮೇಲೆ ಒತ್ತಿದಾಗ, ಅಷ್ಟು ಭಾಗದಲ್ಲಿ ಚರ್ಮ ಸುಟ್ಟು ಆಯಾ ಮುದ್ರೆ ಮೂಡುತ್ತದೆ. ಇದನ್ನು ಮುದ್ರಾಧಾರಣೆ ಎನ್ನುತ್ತಾರೆ.
 ಈ ಮುದ್ರಾಧಾರಣೆಗೆ ಮೊದಲು ಗಣಹೋಮ ಮಾಡಲಾಗುತ್ತದೆ. ಈ ಗಣಹೋಮದ ಬೆಂಕಿಯಲ್ಲಿ ಈ ಮುದ್ರೆಗಳನ್ನು ಕಾಯಿಸಿ ಪುರುಷ ಭಕ್ತರ ಎದೆ ಮತ್ತು ತೋಳುಗಳ ಮೇಲೆ, ಮಹಿಳಾ ಭಕ್ತರ ತೋಳುಗಳ ಮೇಲೆ ಬಿಸಿ ಮುದ್ರೆ ಒತ್ತಲಾಗುತ್ತದೆ ಮತ್ತು ಈ ಕಾರ್ಯಕ್ರಮ ಕರಾವಳಿಯ ಬಹುತೇಕ ಎಲ್ಲ ಮಠ, ದೇವಾಲಯಗಳಲ್ಲಿ ನಡೆಯುತ್ತದೆ.
ಯಾಕಿದು ಧಾರಣೆ...?: ಈ ರೀತಿ ಮುದ್ರೆ ಹಾಕಿ ಚರ್ಮವನ್ನು ಸುಡುವುದರಿಂದ 'ಮಾಡಿದ ಪಾಪಗಳು ಸುಟ್ಟು ನಾಶವಾಗುವುದು' ಎನ್ನುವುದು ಸಂಪ್ರದಾಯದ ಹಿಂದಿರುವ ನಂಬಿಕೆ. ಆದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
 ಆದರೆ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಮಳೆಗಾಲದಲ್ಲಿ ಅನೇಕ ಬಗೆಯ ಚರ್ಮರೋಗ, ರುಜಿನಗಳು ಹರಡುತ್ತವೆ.
ಈ ರೀತಿ ಲೋಹ ಮುದ್ರೆಗಳನ್ನು ಹಾಕುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದಕ್ಕೆ ನಂಬಿಕೆ, ಸಂಪ್ರದಾಯದ ರೂಪ ನೀಡಿ ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸುವಂತೆ ಮಾಡುವುದಕ್ಕೆ ಈ ದೇವಾಲಯಗಳಲ್ಲಿ ಈ ತಪ್ತ ಮುದ್ರಾಧಾರಣೆ ನಡೆಸಲಾಗುತ್ತದೆ.
ಯಾರ್ಯಾರು ಎಲ್ಲೆಲ್ಲಿ...?: ಕೃಷ್ಣ ಮಠದ ಭಾವಿ ಪರ್ಯಾಯ ಪೀಠಾಧೀಶರಾಗಿರುವ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ಆಂಧ್ರಪ್ರದೇಶದ ಕರ್ನೂಲು ಮತ್ತು ಹೈದರಾಬಾದ್‌ನಲ್ಲಿ, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಬೆಂಗಳೂರು ವಿದ್ಯಾಪೀಠದಲ್ಲಿ, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ತುಮಕೂರು ಮತ್ತು ಚೆನ್ನೈಯಲ್ಲಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಬೆಳಗ್ಗೆ ಬೆಂಗಳೂರು, ಚಾಮರಾಜನಗರ ಮತ್ತು ಮಧ್ಯಾಹ್ನ ಮೈಸೂರಿನಲ್ಲಿ, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಬಳ್ಳಾರಿಯಲ್ಲಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಬೆಂಗಳೂರಿನಲ್ಲಿ ತಮ್ಮ ಭಕ್ತಾಭಿಮಾನಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
 ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಉಡುಪಿಯಲ್ಲಿ ಮತ್ತು ಬಾಳೆಗಾರು ಮಠದ ಶ್ರೀ ರಘುಭೂಷಣ ತೀರ್ಥರು ಮಂಗಳೂರು ರಾಘವೇಂದ್ರ ಮಠದಲ್ಲಿ ಮುದ್ರಾಧಾರಣೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement