ಮಲ್ಪೆ: ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ
ಮಲ್ಪೆ: ಕೊಡವೂರು ರೋಟರಿ ಪ್ರಾಯೋಜಿತ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ರೋಟರಿ ವಲಯ ಸೇನಾನಿ ಬಾಲಕೃಷ್ಣ ಎಸ್. ಮದ್ದೊಡಿ, ರೋಟರಿ ವಲಯ 2ರ ಸಹಾಯಕ ಗವರ್ನರ್ ಎಂ. ಮಹೇಶ್ ಕುಮಾರ್, ಹಿರಿಯ ಸಹಶಿಕ್ಷಕಿ ವಿನೋದ ಎಂ, ರೋಟರಿ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್, ಮಾಜಿ ಅಧ್ಯಕ್ಷ ಸುರೇಶ್ ಬಿ. ಕರ್ಕೇರ, ಸಂಯೋಜಕಿ ದುರ್ಗಮ್ಮ, ಇಂಟರ್ಯಾಕ್ಟ್ ಅಧ್ಯಕ್ಷೆ ಗೌತಮಿ, ಕಾರ್ಯದರ್ಶಿ ಪವನ್, ಯಶೋದಾ ಕೇಶವ್, ಕ್ಯಾನಿ ಮೆಂಡೋನ್ಸಾ ಇದ್ದರು.
ವ್ಯಕ್ತಿತ್ವ ವಿಕಸನದಿಂದ ಯಶಸ್ಸು: ಕೆ.ಪಿ. ಶೆಣೈ
ಕಾರ್ಕಳ: ವ್ಯಕ್ತಿತ್ವ ವಿಕಸನ ಆದಾಗ ಮಾತ್ರ ಯಶಸ್ಸು ಸಾಧ್ಯ. ಯಾವುದೇ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಶ್ರೀ ವೆಂಕಟರಮಣ ಶಿಕ್ಷಣ ಪ್ರತಿಷ್ಠಾನ ಕಾರ್ಯದರ್ಶಿ ಕೆ.ಪಿ. ಶೆಣೈ ಹೇಳಿದ್ದಾರೆ.
ಇಲ್ಲಿನ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯಲ್ಲಿ ಪರಿಣಾಮಕಾರಿ ಸಂವಹನ ಕಲೆಯನ್ನು ನಮ್ಮದಾಗಿಸಿಕೊಂಡಾಗ ನಾವು ಎಲ್ಲರೊಡನೆಯೂ ಬೆರೆಯಲು ಹಾಗೂ ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಾಧ್ಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅಧ್ಯಕ್ಷತೆವಹಿಸಿದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಷ್ಮಾ ಮಲ್ಯ ಕೆ. ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಉಷಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಎಸ್ಲಿನ್ ಲವಿನಾ ಡಿ' ಸೋಜ ವಂದಿಸಿದರು. ಅಶ್ವಿನಿ ಶೆಟ್ಟಿ ನಿರೂಪಿಸಿದರು.