ಜಿಲ್ಲಾದ್ಯಂತ ಗಾಳಿ- ಮಳೆ; ಮನೆಗಳಿಗೆ ಹಾನಿ
ಉಡುಪಿ/ಕಾರ್ಕಳ: ಜಿಲ್ಲಾದ್ಯಂತ ಶುಕ್ರವಾರ ಗಾಳಿ ಸಹಿತ ಜೋರಾಗಿ ಪ್ರಾರಂಭವಾದ ಮಳೆ ಶನಿವಾರವೂ ಮುಂದುವರಿದಿದೆ. ಬೆಳಗ್ಗೆ ಸ್ವಲ್ಪ ಹೊತ್ತು ಬಿಟ್ಟಿದ್ದ ಮಳೆ ಸಂಜೆ ಹೊತ್ತಿಗೆ ಧಾರಕಾರವಾಗಿ ಸುರಿಯಿತು. ಕೆಲವೆಡೆ ಮಳೆ ಜತೆಗೆ ಗಾಳಿ ಬೀಸಿದ್ದು, ಮನೆಗಳು ಜಖಂಗೊಂಡಿವೆ.
ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಮದ ಕೊರಗ ಕಾಲೋನಿಯ ಬಸವ ಎಂಬವರ ಮನೆಯು ಭಾಗಶಃ ಕುಸಿದು ಸುಮಾರು ರು. 20 ಸಾವಿರ ಹಾನಿಯಾಗಿದೆ.
ಶೇಡಿಮನೆ ಗ್ರಾಮದ ಜಾರ್ಜ್ ಕೆ. ಜೋಸೆಫ್ ಎಂಬವರ ಮನೆಯು ಬಿರುಗಾಳಿಗೆ ಹಾನಿಯಾಗಿ ರು. 50 ಸಾವಿರ ನಷ್ಟ ಸಂಭವಿಸಿದೆ. ಕೋಣಿ ಗ್ರಾಮದ ಕಟ್ಕೇರಿಯ ರುಕ್ಕು ಮಡಿವಾಳ್ತಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ರು. 55 ಸಾವಿರ, ಉಡುಪಿ ತಾಲೂಕಿನ ಹಾನಗಳ್ಳಿ ಗ್ರಾಮದ ಕೃಷ್ಣಯ್ಯ ಅವರ ಮನೆ ಮೇಲೆ ಮಾವಿನಮರ ಉರುಳಿ ರು. 75 ಸಾವಿರ ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ ಮಳೆ ವಿವರ: ಶನಿವಾರ ಮುಂಜಾನೆವರೆಗೆ ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಸರಾಸರಿ 33.2 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ 22.40 ಮಿ.ಮೀ, ಕುಂದಾಪುರ ತಾಲೂಕಿನಲ್ಲಿ 20 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 57.20 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.
ಹಂಚಿಕಟ್ಟೆಯಲ್ಲಿ ಮನಗೆ ಹಾನಿ: ಕಾರ್ಕಳ ಪಟ್ಟಣದ ಹಂಚಿಕಟ್ಟೆ ಎಂಬಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದು ಬಹುತೇಕ ಹಾನಿಗೊಳಗಾದ ಘಟನೆ ನಡೆದಿದೆ.
ಮಹಮ್ಮದ್ ಸಾಲಿಯಾ ಎಂಬವರಿಗೆ ಸೇರಿರುವ ಹಳೆಯದಾದ ಮನೆ ಕಟ್ಟಡ ಉರುಳಿ ಪಕ್ಕದಲ್ಲಿದ್ದ ಬಾವಿಯೊಳಗೆ ಬಿದ್ದಿದೆ. ಇದರ ತೀವ್ರತೆಗೆ ನೀರಿನ ಪಂಪ್ ಕೂಡ ಬಾವಿಯೊಳಗೆ ಬಿದ್ದಿದ್ದು ಮನೆಯ ಕಾಂಪೌಂಡ್ ಕುಸಿದಿದೆ.
ಇದರಿಂದ ಸುಮಾರು ಮೂರು ಲಕ್ಷ ರು. ನಷ್ಟವಾಗಿದೆ. ತಹಸೀಲ್ದಾರ್ ನಿರ್ಮಲದೇವಿ ಹಾಗೂ ಕಂದಾಯ ಇಲಾಖೆಯ ಇತರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.