ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಡಾ. ಎಕ್ಕಾರ್‌ಗೆ ಅಭಿನಂದನೆ

Vishwanath S
Updated On : 21 Jul 2013, 11:47 am

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ ಡಾ. ಗಣನಾಥ ಎಕ್ಕಾರು ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಭಿನಂದಿಸಲಾಯಿತು.
ವಿ.ವಿ. ಮಟ್ಟದ ಆಯ್ಕೆ ಮತ್ತು ನಾಯಕತ್ವ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ವಿ.ವಿ. ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಅವರು ಡಾ. ಎಕ್ಕಾರು ಅವರನ್ನು ಅಭಿನಂದಿಸಿದರು.
ನಂತರ ಮಾತನಾಡಿದ ಕುಲಪತಿ, ತನ್ನ ವೃತ್ತಿಯೊಂದಿಗೆ ಕಳೆದ 5 ವರ್ಷಗಳಲ್ಲಿ ವಿಶ್ವವಿದ್ಯಾನಿಲಯದ ರಾ.ಸೇ.ಯೋ.ಯ ಚಟುವಟಿಕೆಗಳನ್ನು ಶ್ರದ್ಧೆಯಿಂದ ಅನುಷ್ಠಾನಕ್ಕೆ ತಂದಿರುವುದು ಮಾತ್ರವಲ್ಲ, ವಿ.ವಿ.ಯ ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮಂಗಳೂರು ವಿ.ವಿ.ಯ ರಾ.ಸೇ.ಯೋ.ಯು ರಾಜ್ಯ ಪ್ರಶಸ್ತಿ ಪಡೆದದ್ದು ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಇದರ ಹಿಂದೆ ಡಾ. ಎಕ್ಕಾರರ ಶ್ರಮ ಇದೆ ಎಂದು ಶ್ಲಾಘಿಸಿದರು.
ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಪರ್ಕಾಧಿಕಾರಿಗಳಾದ ಡಾ. ಧನಂಜಯ ಕೆ.ಬಿ. ಮಾತನಾಡಿದರು.
ವಿ.ವಿ.ಯ ಸಂಯೋಜನಾಧಿಕಾರಿ ಪ್ರೊ. ವಿನಿತಾ ರೈ ಕವನದ ಮೂಲಕ ವಿಶಿಷ್ಟವಾಗಿ ಅಭಿನಂದನೆ ಸಲ್ಲಿಸಿದರು. ಮಂಗಳೂರು ವಿ.ವಿ. ಕುಲಸಚಿವ ಪ್ರೊ.ಪಿ.ಎಸ್. ಯಡಪಡಿತ್ತಾಯ ಇದ್ದರು.

ಆ.6ರಿಂದ ಮದ್ಯಪಾನ ವಿರುದ್ಧ ಜಾಗೃತಿಗಾಗಿ ತಾಳಮದ್ದಳೆ
ಬ್ರಹ್ಮಾವರ: ಇಲ್ಲಿನ ಶಿರಿಯಾರದ ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ಮನರಂಜನೆಯೊಂದಿಗೆ ಮನೋವಿಕಾಸ ಎಂಬ ಕಾರ್ಯಕ್ರಮದಡಿ ಆ. 6ರಂದು ಸಂಜೆ 5ರಿಂದ 8ರವರೆಗೆ ಯಕ್ಷಗಾನ ತಾಳಮದ್ದಳೆ ಮೂಲಕ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ಉಡುಪಿಯ ವಾಸುದೇವ ಸಾಮಗ ಅವರ 'ಸಂಯಮಂ' ತಂಡವು ಈ ಕಾರ್ಯಕ್ರಮದಲ್ಲಿ 'ಖಚ ದೇವಯಾನಿ' ಎಂಬ ತಾಳಮದ್ದಳೆ ನಡೆಸಲಿದ್ದು, ಅದರಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ವಿಷಯ ಮಂಥನ ನಡೆಯಲಿದೆ. ಹೆಬ್ರಿ ಗಣೇಶ್ ಕುಮಾರ್ ಅವರ ಭಾಗವತಿಕೆ, ಯಲ್ಲಾಪುರ ಲಾಲ್ ಛಂದ್ ಭಟ್ ಅವರ ಮದ್ದಳೆ, ದೇವೀದಾಸ ಜಲವಳ್ಳಿ ಅವರ ಚೆಂಡೆವಾದನದೊಂದಿಗೆ, ಅರ್ಥಧಾರಿಗಳಾಗಿ ಎಂ.ಆರ್. ವಾಸುದೇವ ಸಾಮಗ, ಎಂ.ಎ. ಹೆಗಡೆ ಶಿರಸಿ, ನಿಟ್ಟೂರು ಅನಂತ ಹೆಗಡೆ, ಪೂಕಳ ಲಕ್ಷ್ಮಿ ನಾರಾಯಣ ಭಟ್ ಹಾಗೂ ಇತರರು ಭಾಗವಹಿಸಲಿದ್ದಾರೆ.

ಭಜನಾ ಮಹೋತ್ಸವ ಉದ್ಘಾಟನೆ
ಬ್ರಹ್ಮಾವರ: ಇಲ್ಲಿನ ಭದ್ರಗಿರಿಯ ಶ್ರೀ ವೀರವಿಠಲ ದೇವಸ್ಥಾನದಲ್ಲಿ ಶುಕ್ರವಾರ ಭಜನಾ ಮಹೋತ್ಸವವನ್ನು ಉದ್ಯಮಿ ವಿಶ್ವನಾಥ ಶೆಣೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಗಣ್ಯರಾದ ಭದ್ರಗಿರಿ ಪಾಂಡುರಂಗ ಆಚಾರ್ಯ, ತೋನ್ಸೆ ಹರಿಕೃಷ್ಣ ಪೈ, ತೋನ್ಸೆ ದೇವದಾಸ ಪೈ, ಮಂಜುನಾಥ ನಾಯಕ್, ಶಿರಿಯಾರ ಗಣೇಶ ನಾಯಕ್, ಪ್ರಭಾಕರ ಭಟ್, ಬೆಳ್ವೆ ಸತೀಶ್ ಕಿಣಿ, ಚಂದ್ರಕಾಂತ ಪ್ರಭು ಇದ್ದರು. ವೇ.ಮೂ. ಕಾಶೀನಾಥ್ ಭಟ್ ಅವರ ವಿಶೇಷ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಶ್ರೀ ವೀರವಿಠಲ ಸನ್ನಿಧಾನದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೂ ವಿವಿಧ ಊರುಗಳ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಶ್ರೀದೇವರಿಗೆ ಹೂವಿನ ಅಲಂಕಾರ, ಮಹಾಪೂಜೆ ಜರುಗಿತು.

ಮಣಿಪಾಲ: ಸೌರ ವಿದ್ಯುತ್ ದೀಪ ಅಳವಡಿಕೆ
ಉಡುಪಿ: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಡಾ.ಟಿ.ಎಂ.ಎ. ಪೈ ಫೌಂಡೇಷನ್, ಅಗ್ರಹಾರದ ಶ್ರೀದುರ್ಗಾಪರಮೇಶ್ವರಿ ಹಿ.ಪ್ರಾ. ಶಾಲೆ ಅಭಿವೃದ್ಧಿ ಸಮಿತಿ ವತಿಯಿಂದ ಅಗ್ರಹಾರ ಶಾಲೆ ಮತ್ತು ದೇವಸ್ಥಾನ ವಠಾರದಲ್ಲಿ ಸೌರ ವಿದ್ಯುತ್ ದೀಪ ಅಳವಡಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಭಾರತೀಯ ವಿಕಾಸ ಟ್ರಸ್ಟ್ ಆಡಳಿತ ವಿಶ್ವಸ್ಥ ಕೆ.ಎಂ. ಉಡುಪ, ಕಟಪಾಡಿ ಗ್ರಾಪಂ ಅಧ್ಯಕ್ಷ ವಿನಯ ಬಲ್ಲಾಳ್, ತಾಪಂ ಸದಸ್ಯ ಶ್ರೀಕರ ಅಂಚನ್, ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಭರತ್ ಹೆಗ್ಡೆ, ಬಿವಿಟಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ, ಸೆಲ್ಕೋ ಸಂಸ್ಥೆ ಪ್ರಬಂಧಕ ಸುರೇಶ್ ನಾಯ್ಕ್, ದೇವಸ್ಥಾನ ಅರ್ಚಕ ವಾದಿರಾಜ ಭಟ್ ಇದ್ದರು.

ಕೊಡವೂರು: ಸುಮನಸಾ ಸಂಘಟನೆ ಮಹಾಸಭೆ
ಉಡುಪಿ: ಕೊಡವೂರು ಸುಮನಸಾ ಸಾಂಸ್ಕೃತಿಕ ಸಂಘಟನೆಯ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು. ಕಾರ್ಯದರ್ಶಿ ಜ್ಯೋತಿ ಎಸ್. ಚೆನ್ನಂಗಡಿ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಪ್ರಶಾಂತ್ ಜಿ. ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಗೌರವಾಧ್ಯಕ್ಷ ಎಂ.ಎಸ್. ಭಟ್, ಪ್ರಧಾನ ಕಾರ್ಯದರ್ಶಿ ಬಾಸುಮ ಕೊಡಗು ಇದ್ದರು.

ಕಾಲೇಜ್ ಕಟ್ಟಡಕ್ಕೆ ಜಮೀನು ಮಂಜೂರು
ಉಡುಪಿ: ಇಲ್ಲಿನ ಅಜ್ಜರಕಾಡು ಡಾ.ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡಕ್ಕೆ 0.61 ಎಕ್ರೆ ಜಮೀನನ್ನು ಉಡುಪಿ ತಾಲೂಕಿನ ಮೂಡನಿಡಂಬೂರು ಗ್ರಾಮದಲ್ಲಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಪ್ರಯತ್ನದಿಂದ ಕಂದಾಯ ಇಲಾಖೆ ಮಂಜೂರು ಮಾಡಿದೆ. ಕಳೆದ ಮೂರು ವರ್ಷಗಳಿಂದ ಈ ಭೂಮಿಯನ್ನು ಬೇರೆ ಉದ್ದೇಶಕ್ಕೆ ಕಾದಿರಿಸಲಾಗಿದ್ದರೂ, ಯಾವುದೇ ಕಾಮಗಾರಿಯನ್ನು ಅಲ್ಲಿ ನಡೆಸದೆ ಖಾಲಿ ಬಿಟ್ಟಿದ್ದು, ಅದನ್ನು ಜು.10ರಿಂದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಕಾದಿರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಶೈಕ್ಷಣಿಕ ಕಾರ್ಯಾಗಾರ
ಉಡುಪಿ: ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್‌ನ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಒಂದು ದಿನದ ಶೈಕ್ಷಣಿಕ ಕಾರ್ಯಗಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಇತ್ತೀಚಿಗೆ ಜರುಗಿತು. ಮಂಗಳೂರಿನ ಇನ್ಫೋಸಿಸ್ ಅಧಿಕಾರಿಗಳಾದ ರವಿರಾಜ ಬೆಳ್ಮಣ್, ನಿತಿನ್ ಕುಮಾರ್, ರಾಮ್‌ಪ್ರಸಾದ್, ರೋಬೋಸಾಫ್ಟ್ ಕಂಪನಿಯ ಅಧಿಕಾರಿಗಳಾದ ಕೆ. ಶ್ರೀನಿವಾಸ ರಾವ್ ಹಾಗೂ ಜ್ಯೋತಿ ಮಹಾದೇವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನೀ.ಬಿ. ವಿಜಯ ಬಲ್ಲಾಳ್, ಮಣಿಪಾಲ ಡಾಟ್ ನೆಟ್‌ನ ಡಾ.ಯು.ಸಿ. ನಿರಂಜನ, ಮಹಾದೇವ ಇದ್ದರು. ಉಪಾಧ್ಯಕ್ಷ ಎಂ. ಗಂಗಾಧರ ರಾವ್  ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು.

ಟ್ಯಾಕ್ಸಿಮೆನ್ ಅಸೋಸಿಯೇಶನ್ ಬಂಟಕಲ್ಲು ಶಾಖೆ ಉದ್ಘಾಟನೆ
ಉಡುಪಿ:  ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್‌ನ ಬಂಟಕಲ್ಲು ಘಟಕದ ಉದ್ಘಾಟನೆಯನ್ನು ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್‌ನ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಇತ್ತೀಚಿಗೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಬಂಟಕಲ್ಲು ಘಟಕದ ಗೌರವಾಧ್ಯಕ್ಷ ಮಾಧವ ಕಾಮತ್ ವಹಿಸಿದ್ದರು. ಶಿರ್ವ ಗ್ರಾಪಂ ಸದಸ್ಯ ಕೆ. ಆರ್. ಪಾಟ್ಕರ್, ಗ್ರಾಪಂ ಸದಸ್ಯ ವೀರೇಂದ್ರ ಶೆಟ್ಟಿ, ಮೆಲ್ವಿನ್ ಸಲ್ಡಾನಾ, ಘಟಕದ ನೂತನ ಅಧ್ಯಕ್ಷ ವಿನ್ಸೆಂಟ್ ಕಸ್ತಲಿನೊ, ಕೋಶಾಧಿಕಾರಿ ದಿನೇಶ್ ಅರಸೀಕಟ್ಟೆ, ಸಹ ಕಾರ್ಯದರ್ಶಿ ಯಶವಂತ್ ಹೇರೂರು ಇದ್ದರು. ಕಾರ್ಯದರ್ಶಿ ಹೆನ್ರಿ ಫೆರ್ನಾಡಿಸ್ ನಿರೂಪಿಸಿದರು. ಸ್ಥಳೀಯ ಸಮಿತಿ ಉಪಾಧ್ಯಕ್ಷ ಹರೀಶ್ ಹೇರೂರು ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement