ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮಹಿಳೆಯರೇ ಸ್ವಾಭಿಮಾನಿಗಳಾಗಿ: ಡಾ. ನಿಕೇತನ

Vishwanath S
Updated On : 21 Jul 2013, 11:46 am

ಉಡುಪಿ: ಮಹಿಳೆಯನ್ನು ಪೂಜ್ಯ ಭಾವನೆಯಿಂದ ಕಾಣುತ್ತಿದ್ದ ತುಳುನಾಡಿನಲ್ಲಿ ಇಂದು ಮಹಿಳೆಯರಿಗೆ ಸಂಬಂಧಿಸಿದಂತೆ ಕೆಲವು ಅಘಾತಕಾರಿ ಘಟನೆಗಳು ನಡೆಯುತ್ತಿವೆ. ಆದ್ದರಿಂದ ಮಹಿಳೆ ಇವುಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಸ್ವಾಭಿಮಾನಿಯಾಗುವ ಅಗತ್ಯವಿದೆ ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ ಸಂಯೋಜಕಿ ಡಾ. ನಿಕೇತನ ಅಭಿಪ್ರಾಯಪಟ್ಟಿದ್ದಾರೆ.
ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ, ಮಹಿಳಾ ಮಂಡಳಿಗಳ ಒಕ್ಕೂಟ ಹಾಗೂ ತುಳು ಸಿರಿ ಚಾವಡಿ ಜಂಟಿ ಆಶ್ರಯದಲ್ಲಿ ಶನಿವಾರ  'ಆಟಿಡೊಂಜಿ ದಿನ ಪೊಂಜೊವೆ ಕೂಟ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲ ಬದಲಾದಂತೆ ಆಚಾರ- ವಿಚಾರಗಳು ಬದಲಾಗುತ್ತ ಹೋಗುತ್ತಿವೆ. ಪ್ರೀತಿ, ವಿಶ್ವಾಸ, ನಂಬಿಕೆ ಮೇಲೆ ನಿಂತಿದ್ದ ಸಂಬಂಧಗಳು ಇಂದು ವ್ಯಾವಹಾರಿಕವಾಗಿ ಬಿಟ್ಟಿವೆ. ಈ ಸಂಬಂಧಗಳನ್ನು ಮಾನವೀಯತೆಯೊಂದಿಗೆ ಮರುಸ್ಥಾಪಿಸಬೇಕಾದ ಅಗತ್ಯವಿದೆ ಎಂದರು.
ಆಟಿ ತಿಂಗಳು ತುಳುನಾಡಿನ ಸಂಸ್ಕೃತಿ, ವೈವಿಧ್ಯತೆಗಳು ಸೇರಿದಂತೆ ವಿವಿಧ ಆಚರಣೆಗಳನ್ನು ಪರಿಚಯಿಸುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಡಾ. ನಿಕೇತನ ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ತುಳು ಸಿರಿ ಚಾವಡಿ ಅಧ್ಯಕ್ಷ ಈಶ್ವರ ಚಿಟ್ಪಾಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕಾರ್ಯದರ್ಶಿ ವಸಂತಿ ರಾವ್, ಬಡಗುಬೆಟ್ಟು ಕೋ- ಆಪರೇಟಿವ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಇಂದ್ರಾಳಿ ಜಯಕರ ಶೆಟ್ಟಿ ಇದ್ದರು. ಮ.ಗ್ರಾ.ವಿ.ಸ. ಸಂಘದ ನಿರ್ದೇಶಕಿ ಹರಿಣಿ ದಾಮೋದರ್ ಸ್ವಾಗತಿಸಿ, ವಂದಿಸಿದರು.
ಆಟಿಡೊಂಜಿ ದಿನದ ಅಂಗವಾಗಿ ವಿವಿಧ ಮಹಿಳಾ ಮಂಡಳಿಗಳ ಮಹಿಳೆಯರು ಸೇರಿ ಪತ್ರೊಡೆ, ಹಲಸಿನಕಾಯಿ ಗಟ್ಟಿ, ಮೆಂತೆ ಗಂಜಿ, ಪುಂಡಿ, ಅರಸಿನ ಎಲೆಗಟ್ಟಿ, ಕಡುಬು, ಚಿಲಿಂಬಿ, ಒಂದೆಲಗ ಚಟ್ನಿ, ಉದ್ದಿನ ಚಟ್ನಿ, ನುಗ್ಗೆ ಸೊಪ್ಪಿನ ವಡೆ, ಹಲಸಿನ ಬೀಜದ ವಡೆ, ಹುರುಳಿ ಒಗ್ಗರಣೆ, ಹಪ್ಪಳ ಚಟ್ನಿ ಮತ್ತಿತರ ವಿವಿಧ ಬಗೆ ಖಾದ್ಯಗಳನ್ನು ತಯಾರಿಸಿ ವಿತರಿಸಿದರು.
ಕಾಲ ಬದಲಾದಂತೆ ಆಚಾರ- ವಿಚಾರಗಳು ಬದಲಾಗುತ್ತ ಹೋಗುತ್ತಿವೆ. ಪ್ರೀತಿ, ವಿಶ್ವಾಸ, ನಂಬಿಕೆ ಮೇಲೆ ನಿಂತಿದ್ದ ಸಂಬಂಧಗಳು ಇಂದು ವ್ಯಾವಹಾರಿಕವಾಗಿ ಬಿಟ್ಟಿವೆ. ಈ ಸಂಬಂಧಗಳನ್ನು ಮಾನವೀಯತೆಯೊಂದಿಗೆ ಮರುಸ್ಥಾಪಿಸಬೇಕಾದ ಅಗತ್ಯವಿದೆ.
 ಡಾ. ನಿಕೇತನ, ಸಂಯೋಜಕಿ, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ತೆಂಕನಿಡಿಯೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement