ಯಕ್ಷಗಾನ ಗೊಂಬೆಯಾಟ ತಂಡ 24ರಂದು ಜಪಾನ್ಗೆ
ಉಡುಪಿ: ಕರಾವಳಿಯ ಜಾನಪದ ಕಲೆಗಳಲ್ಲಿ ವಿಶೇಷವಾದ ಯಕ್ಷಗಾನ ಗೊಂಬೆಯಾಟ ಕಲೆಯನ್ನು ಕಳೆದ 350 ವರ್ಷಗಳಿಂದ ಕಾಪಾಡಿಕೊಂಡು ಬಂದ ಉಪ್ಪಿನಕುದ್ರು ಶ್ರೀಗಣೇಶ ಯಕ್ಷಗಾನ ಗೊಂಬೆಯಾಟ ತಂಡ ಜು.24ರಂದು ಜಪಾನ್ ಪ್ರವಾಸ ಕೈಗೊಳ್ಳಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಗೊಂಬೆಯಾಟ ಜಾನಪದ ಕಲೆಯನ್ನು ನಿರಂತರವಾಗಿ ಪ್ರದರ್ಶಿಸಿ, ಜನ ಮೆಚ್ಚುಗೆಗೆ ಪಾತ್ರವಾದ ಈ ತಂಡ ಈವರೆಗೂ ಅನೇಕ ಬಾರಿ ವಿದೇಶ ಪ್ರವಾಸ ಮಾಡಿದೆ. ಈಗ ಅಂತಾರಾಷ್ಟ್ರೀಯ ಖ್ಯಾತಿಯ ಭಾಸ್ಕರ್ ಕೊಗ್ಗ ಕಾಮತರ ನೇತೃತ್ವದಲ್ಲಿ ಜಪಾನ್ನ 'ಮಾಡರ್ನ್ ಪಪ್ಪೆಟ್ ಸೆಂಟರ್ ಕಾವಸಾಕಿ' ಪ್ರಾಯೋಜಕತ್ವದಲ್ಲಿ ಜಪಾನ್ ದೇಶಕ್ಕೆ ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಲು ತೆರಳಲಿದೆ. 20 ದಿನಗಳ ಪ್ರವಾಸದಲ್ಲಿ ಈ ತಂಡ 10 ದಿನಗಳ ಕಾಲ ನಕೋಯಾ, ಒಸಾಕಾ, ಟೋಕಿಯೋ, ಕವಾಸಾಕಿ, ನಾಗಸಾಕಿ ಮುಂತಾದ ಪ್ರಮುಖ ನಗರಗಳಲ್ಲಿ ಗೊಂಬೆಯಾಟ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದೆ. ಆ.5ರಿಂದ 15ರವರೆಗೆ ಜಪಾನ್ನ ಲಿಡಾ ಅಂತಾರಾಷ್ಟ್ರೀಯ ಗೊಂಬೆಯಾಟ ಉತ್ಸವದಲ್ಲಿಯೂ ತಂಡ ಪ್ರದರ್ಶನ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ