ವಿದ್ಯಾರ್ಥಿ ವೇತನಕ್ಕೆ ಆಧಾರ್: ಮರುಪರಿಶೀಲನೆಗೆ ಒತ್ತಾಯ
ಉಡುಪಿ: ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನಕ್ಕೆ ಆಧಾರ್ ಕಾರ್ಡ್ ಸಲ್ಲಿಕೆ ಕಡ್ಡಾಯಗೊಳಿಸಿದ್ದು, ಇದು ಆತುರದ ನಿರ್ಧಾರವಾಗಿದೆ. ಆದ್ದರಿಂದ ಈ ಕ್ರಮವನ್ನು ಸರ್ಕಾರ ಕೂಡಲೇ ಮರುಪರಿಶೀಲಿಸಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೆಶನ್ ಸರ್ಕಾರವನ್ನು ಒತ್ತಾಯಿಸಿದೆ. ಈಗಾಗಲೇ ಆಧಾರ್ ಕಾರ್ಡ್ ಎಲ್ಲರಿಗೂ ವಿತರಣೆ ಆಗಿಲ್ಲ. ಇಂತಹ ಅತಂತ್ರ ಸ್ಥಿತಿಯಲ್ಲಿ ಆಧಾರ್ ಕಾರ್ಡ್ನ್ನು ವಿದ್ಯಾರ್ಥಿ ವೇತನಗಳಿಗೆ ಮಾತ್ರವಲ್ಲ, ಯಾವುದೇ ಸೌಲಭ್ಯ ವಿತರಣೆಗೂ ಮಾನದಂಡವಾಗಿ ಸರ್ಕಾರ ಪರಿಗಣಿಸಬಾರದು ಎಂದು ಸಂಘಟನೆಯ ಉಡುಪಿ ಜಿಲ್ಲಾ ಸಂಚಾಲಕ ಮೊಹಮ್ಮದ್ ಜೆಹಾನ್ಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.