ಸುದ್ದಿ ಸಂಕ್ಷೇಪ
ತ್ಯಾಜ್ಯ ಸುರಿಯಲು ಬಂದ ವಾಹನ: ಮಾಲೀಕನಿಗೆ ದಂಡ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಸಂತೆಕಟ್ಟೆ ಹೈವೇ ಬಳಿ ರಸ್ತೆ ಬದಿ ಕಟ್ಟಡ ನಿರ್ಮಾಣದ ತ್ಯಾಜ್ಯ ಸಾಮಗ್ರಿ ಸುರಿಯಲು ಬಂದಿದ್ದ ವಾಹನ ತಡೆದು ಮಾಲೀಕರ ಮೇಲೆ ರು. 1,000 ದಂಡ ವಿಧಿಸಲಾಗಿದೆ. ಈ ರೀತಿ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ರಸ್ತೆ ಬದಿ ಕಟ್ಟಡದ ತ್ಯಾಜ್ಯ ವಸ್ತು, ಮಣ್ಣು ಸುರಿಯುವ ವಾಹನಗಳ ಮೇಲೆ ನಿಗಾ ಇರಿಸಿ ದಂಡ ವಿಧಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ನಗರಸಭಾ ಪೌರಾಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಹಣಕಾಸು ಶಿಕ್ಷಣ' ಕಾರ್ಯಾಗಾರ
ಉಡುಪಿ: ಸಾಕಷ್ಟು ಬಡ್ಡಿಯ ಆಮಿಷ ಒಡ್ಡಿ ಠೇವಣಿ ಸಂಗ್ರಹಿಸುವ ಕ್ಷೇತ್ರಕ್ಕೆ ಮರುಳಾಗದೆ ಸಂಪಾದನೆಯ ಉಳಿತಾಯವನ್ನು ಎಚ್ಚರಿಕೆಯಿಂದ ಯೋಗ್ಯ ಕ್ಷೇತ್ರದಲ್ಲಿ ಹೂಡಿದಾಗ ಹಣಕಾಸು ಪರಿಸ್ಥಿತಿ ಸುಭದ್ರವಾಗುವುದಾಗಿ ಸೆಬಿ (ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಸಂಸ್ಥೆ ತರಬೇತುದಾರರಾದ ಪ್ರೊ. ರಾಧಾಕೃಷ್ಣ ಶರ್ಮ ಹೇಳಿದ್ದಾರೆ. ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಯೋಜಿಸಿದ 'ಹಣಕಾಸು - ಶಿಕ್ಷಣ' ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಸಂಪಾದನೆಯ ಉಳಿತಾಯವೇ ಸಂಪತ್ತಿನ ಮಾಪಕವಾಗಿರದೆ ಉಳಿತಾಯವನ್ನು ಸರಿಯಾದ ಕ್ಷೇತ್ರದಲ್ಲಿ ತೊಡಗಿಸಿ ಬೆಳೆಸಿದಾಗ ಅದು ಮನುಷ್ಯನ ಸಿರಿವಂತಿಕೆ ಕಾರಣವಾಗುವುದಾಗಿ ಹೇಳಿದ ಅವರು, ದಿಢೀರ್ ಶ್ರೀಮಂತಿಕೆ ಸಾಧ್ಯವಿಲ್ಲದಿದ್ದರೂ ವ್ಯವಸ್ಥಿತ ಹಣಕಾಸು ಯೋಜನೆಯಿಂದ ಶ್ರೀಮಂತಿಕೆ ಖಂಡಿತ ಅಸಾಧ್ಯವೂ ಅಲ್ಲ ಎಂದು ತಿಳಿಸಿದರು. ಪ್ರಾಂಶುಪಾಲ ಮಧುಸೂಧನ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವೃತ್ತಿ ಮಾರ್ಗದರ್ಶನ ಸಂಘದ ಅಧ್ಯಾಪಕ ಸಲಹೆಗಾರ ಜಾವೆದ್ ಸ್ವಾಗತಿಸಿದರು. ಭವ್ಯರಾಣಿ ನಿರೂಪಿಸಿ, ಪಲ್ಲವಿ ವಂದಿಸಿದರು.