ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಗಿಡ ನೆಟ್ಟರೆ ಸಾಲದು... ರಕ್ಷಣೆಯೂ ಬೇಕು

Mainashree
Updated On : 24 Jul 2013, 10:22 am

ಪುತ್ತೂರು: ಮರ ಬೆಳೆಸುವ ಕಾರ್ಯಕ್ರಮವಾದ ವನಮಹೋತ್ಸವ ಎಂಬುದು ಇತ್ತೀಚೆಗೆ ನಾಮ್ ಕೇ ವಾಸ್ತೆಯ ಸರ್ಕಾರಿ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿದೆ. ಹಿಂದೆಲ್ಲಾ ಹಲವಾರು ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಸಮಾಜ ಸೇವೆಯ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಇದೆಲ್ಲಾ ಮಾಯವಾಗಿದೆ.
ಕಾಳಜಿ ಕೊರತೆ: ಈ ಬಾರಿಯಂತೂ ಪುತ್ತೂರಿನಲ್ಲಿ ಅರಣ್ಯ ಇಲಾಖೆ ಹೊರತುಪಡಿಸಿ ಯಾರೂ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಂತೆ ಕಂಡು ಬರುತ್ತಿಲ್ಲ. ಈ ತನಕ ವನಮಹೋತ್ಸವಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳು ನಡೆದಿರುವ ಬಗ್ಗೆಯೂ ವರದಿಯಾಗಿಲ್ಲ.
ಅರಣ್ಯ ಇಲಾಖೆ ಪ್ರತಿವರ್ಷವೂ ಹಲವಾರು ಕಡೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಿದೆ. ಆದರೆ ಸೂಕ್ತ ರಕ್ಷಣೆ ಮಾಡುವಲ್ಲಿ ವಿಫಲವಾಗಿರುವುದರಿಂದ ನೆಟ್ಟ ಗಿಡಗಳು ಮತ್ತೊಂದು ವನಮಹೋತ್ಸವ ಆಚರಣೆ ವೇಳೆಗೆ ಸತ್ತು ಹೋಗಿರುವ ಪ್ರಮೇಯವೇ ಹೆಚ್ಚು.
ಗಿಡ ನೆಟ್ಟರೆ ಸಾಲದು, ರಕ್ಷಣೆಯೂ ಬೇಕು: ಅರಣ್ಯ ಇಲಾಖೆ ಹಿಂದೆಲ್ಲಾ ಅಕೇಶಿಯಾ, ಗಾಳಿ ಮತ್ತಿತರ ಗಿಡಗಳನ್ನು ಹೆಚ್ಚಾಗಿ ನೆಡುತಿತ್ತು. ಆದರೆ ಇದೀಗ ಫಲವಸ್ತುಗಳಾದ ಹಲಸು, ಮಾವು ಸೇರಿದಂತೆ ಹೆಬ್ಬಲಸು, ಸಾಗುವಾನಿ ಇನ್ನಿತರ ಬೆಲೆಬಾಳುವ ಮರಗಳನ್ನು ಬೆಳೆಸುವ ಕಾರ್ಯ ನಡೆಸುತ್ತಿದೆ.
ಆದರೆ ವನ ನಿರ್ಮಾಣದಲ್ಲಿ ಗಿಡಗಳನ್ನು ನೆಡುವ ಜೊತೆಗೆ ಅದನ್ನು ಉಳಿಸುವ ಕೆಲಸವೂ ಪ್ರಮುಖವಾಗಿದೆ. ಗಿಡಗಳಿಗೆ ಸರಿಯಾದ ಭದ್ರತಾ ಬೇಲಿಗಳ ನಿರ್ಮಾಣವೂ ಮುಖ್ಯವಾಗಿದ್ದು ಅದನ್ನು ಸರಿಯಾಗಿ ಮಾಡುವ ಕಾರ್ಯಕ್ಕೆ ಗಮನ ಹರಿಸಬೇಕಾಗಿದೆ.
ಇಲಾಖೆ ಕೆಲವು ಕಡೆಗಳಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿದ್ದರೂ ಅದಕ್ಕೆ ಊರುಗೋಲಾಗಿ ಸಣ್ಣ ಪುಟ್ಟ ಮರದ ರೆಂಬೆಗಳನ್ನು ಬಳಸುವ ಕಾರಣ ಅದನ್ನು ಮುರಿದು ಬೇಲಿಗಳು ಹಾಳಾಗುತ್ತಿವೆ. ಇದರಿಂದಾಗಿ ಗಿಡಗಳು ಜಾನುವಾರು ಹಾಗೂ ಇನ್ನಿತರರ ಪಾಲಾಗುತ್ತಿವೆ.
 ಗಿಡ  ನೆಡಲೂ ಹಿಂದೇಟು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನೆಡುತೋಪು ಬೆಳೆಸುವ, ರಸ್ತೆ ಬದಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲು ಸಾಕಷ್ಟು ಅವಕಾಶಗಳಿವೆ. ಈ ಕಾರ್ಯ ಮಾಡುವವರಿಗೆ ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಂಚಾಯಿತಿ ಮೂಲಕ ತಲಾ ಒಬ್ಬೊಬ್ಬರಿಗೆ ಗರಿಷ್ಠ 100 ಮಾನವ ದಿನಗಳ ಕೂಲಿ ಪಡೆಯಲು ಅವಕಾಶಗಳಿವೆ. ಇದರೊಂದಿಗೆ ತಾವು ನಡೆಸಿದ ಸಾಮಾಜಿಕ ಕಾಳಜಿಯ ಕೆಲಸಕ್ಕೆ ಕೂಲಿ ಪಡೆಯುವ ಅವಕಾಶಗಳಿವೆ. ಆದರೆ ಮಾಹಿತಿ ಕೊರತೆಯಿಂದಾಗಿ ಯುವಕ-ಯುವತಿ ಮಂಡಲಗಳಿಗೆ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ಈ ವಿಚಾರದ ಅರಿವು ಇಲ್ಲದ ಕಾರಣ ಯಾರೂ ಗಿಡ ನೆಡಲು ಮುಂದೆ ಬರುತ್ತಿಲ್ಲ.
ಅಗಲೀಕರಣಕ್ಕೆ ಮರಗಳು ಬಲಿ: ಮಾಣಿ- ಮೈಸೂರು ರಾಜ್ಯ ಹೆದ್ದಾರಿ ಅಗಲೀಕರಣದ ಸಂದರ್ಭ ಮುಖ್ಯ ರಸ್ತೆಯಲ್ಲಿದ್ದ ಎಲ್ಲ ಮರಗಳನ್ನು ಕಡಿದು ಉರುಳಿಸಲಾಗಿತ್ತು. ಕಾಮಗಾರಿ ಮುಗಿದ ಬಳಿಕ ಮತ್ತೆ ಗಿಡಗಳನ್ನು ನೆಡಲಾಗುವುದೆಂದು ಪರಿಸರವಾದಿಗಳಿಗೆ ಭರವಸೆ ನೀಡಲಾಗಿತ್ತು. ಕಾಮಗಾರಿ ಆರಂಭಗೊಂಡು ನಾಲ್ಕ ವರ್ಷವಾದರೂ ಪೂರ್ಣವಾಗಿಲ್ಲವಾದ್ದರಿಂದ ಗಿಡ ನೆಡುವ ಕಾರ್ಯವೂ ಆರಂಭವಾಗಿಲ್ಲ.
    ವನಮಹೋತ್ಸವ ಇಲಾಖೆ ಕಾರ್ಯಕ್ರಮವಾಗಿ ಮೀಸಲಾಗದೆ ಜನರ ಕಾರ್ಯಕ್ರಮವಾಗಿ ಮಾರ್ಪಾಟುಗೊಂಡಾಗ ಮಾತ್ರ ವನಮಹೋತ್ಸವ ನೈಜ ಕಳೆ ಪಡೆಯಬಹುದು ಹಾಗೂ ಒಣಮಹೋತ್ಸವಾಗದಂತೆ ತಡೆಯಬಹುದು.

 ಸಂಶುದ್ದೀನ್ ಸಂಪ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement