ಮಳೆ ಬಿರುಸು: ತೀವ್ರಗೊಂಡ ಕಡಲ್ಕೊರೆತ
ಉಡುಪಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಇಳಿಮುಖವಾಗಿದ್ದ ಮಳೆ ಮಂಗಳವಾರ ಮತ್ತೆ ತೀವ್ರಗೊಂಡಿತ್ತು. ಜೊತೆಗೆ ಜಿಲ್ಲೆಯಾದ್ಯಂತ ಕಡಲ್ಕೊರೆತವೂ ತೀವ್ರಗೊಂಡಿದೆ.
ಕುಂದಾಪುರ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಮುಂಜಾಗರೂಕತೆ ಕ್ರಮವಾಗಿ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಆದರೆ ಶಾಲೆ, ಕಾಲೇಜುಗಳಿಗೆ ಅಪಾಯವಾಗುವಂತಹ ಯಾವುದೇ ಸಂದರ್ಭಗಳು ಒದಗಿಬಂದಿಲ್ಲ.
ಎರ್ಮಾಳು ಮೀನುಗಾರಿಕೆ ರಸ್ತೆ ಅಪಾಯದಲ್ಲಿ: ಉಡುಪಿ ತಾಲೂಕಿನ ಪಡುಬಿದ್ರಿ ಸಮೀಪದ ತೆಂಕಎರ್ಮಾಳು, ಉದ್ಯಾವರ ಪಡುಕರೆ, ಮಲ್ಪೆಯ ಹನುಮಂತನಗರಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಎರ್ಮಾಳಿನ ಮೀನುಗಾರಿಕೆ ರಸ್ತೆ ಅಪಾಯದಂಚಿನಲ್ಲಿದೆ. ಹನುಮಂತ ನಗರದಲ್ಲಿ ಸಮುದ್ರ ತೀರದಲ್ಲಿ ಹಾಕಲಾಗಿದ್ದ ಸೀಮೆಂಟ್ ಬೆಂಚುಗಳು ಕಡಲು ಪಾಲಾಗಿವೆ. ಕೋಟ ಮಣೂರಿನಲ್ಲಿಯೂ ಕೊರೆತ ತೀವ್ರಗೊಂಡಿದ್ದು, ಮೀನುಗಾರಿಕೆ ರಸ್ತೆಯ ಪಕ್ಕದಲ್ಲಿ ಭಾರಿ ಕುಸಿತ ಉಂಟಾಗಿದೆ.
ವಿವಿಧೆಡೆ ಹಾನಿ: ಕುಂದಾಪುರ ಪಡುವಾಲ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗ ಮಂಟಪಕ್ಕೆ ಹಾನಿಯಾಗಿದ್ದು, ಸುಮಾರು ರು. 10 ಸಾವಿರ ನಷ್ಟವಾಗಿದೆ. ಉಪ್ಪಿನಕುದ್ರು ಗ್ರಾಮದ ಸೀತಾರಾಮ ಆಚಾರ್ಯ ಎಂಬವರ ಮನೆಗೆ ಭಾಗಶಃ ಹಾನಿಯಾಗಿ ಸುಮಾರು ರು. 25 ಸಾವಿರ, ಗುಜ್ಜಾಡಿ ಗ್ರಾಮದ ಚಂದು ಪೂಜಾರ್ತಿ ಅವರ ಮನೆ ಹಾನಿಗೀಡಾಗಿ ಸುಮಾರು ರು. 15 ಸಾವಿರ ನಷ್ಟವಾಗಿದೆ. ಹಳ್ನಾಡು ಗ್ರಾಮದ ಶಂಕರ ಶೆಟ್ಟಿ ಮನೆಯ ಗೋಡೆ ಬಿದ್ದು ಸುಮಾರು ರು. 10 ಸಾವಿರ ನಷ್ಟವಾಗಿದೆ.
ಉಡುಪಿ ತಾಲೂಕಿನ ಕಡೆಕಾರು ಗ್ರಾಮದ ಲೇಬರ್ ಕಾಲೋನಿಯ ಗಂಗೆ ಎಂಬವರ ಮನೆಗೆ ರು. 7,500, ಕಾರ್ಕಳ ತಾಲೂಕಿನ ಚಾರ ಗ್ರಾಮದ ಚೀಂಕ್ರ ಪೂಜಾರಿ ಅವರ ಮನೆಗೆ ರು. 6 ಸಾವಿರ ಹಾನಿಯಾಗಿದೆ.
ಜಿಲ್ಲೆಯಲ್ಲಿ ಮಳೆ ವಿವರ: ಮಂಗಳವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 62.30 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ 30.30 ಮಿ.ಮೀ., ಕಾರ್ಕಳ 65.20 ಮಿ.ಮೀ. ಹಾಗೂ ಕುಂದಾಪುರ ತಾಲೂಕಿನಲ್ಲಿ 91.40 ಮಿ.ಮೀ. ಮಳೆಯಾಗಿದೆ.