ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಡಲಬ್ಬರ: ಕರಾವಳಿ ತತ್ತರ

Mainashree
Updated On : 25 Jul 2013, 10:28 am

ಉಡುಪಿ; ಜಿಲ್ಲೆಯಲ್ಲಿ ಇದುವರೆಗೆ ಕಂಡು ಕೇಳರಿಯದ ಪ್ರಮಾಣದಲ್ಲಿ ಕಡಲು ಕೊರೆತ ಈ ಬಾರಿಯ ಮಳೆಗಾಲದಲ್ಲಿ ಸಂಭವಿದೆ.
ಸಾಧಾರಣವಾಗಿ ಉಡುಪಿ ತಾಲೂಕಿನ ಪಡುಬಿದ್ರಿ, ಕುಂದಾಪುರ ತಾಲೂಕಿನ ಕೋಟ, ಮರವಂತೆ ಪ್ರದೇಶದಲ್ಲಿ ಕೊರೆತ ಸಂಭವಿಸುತ್ತಿತ್ತು. ಈ ಬಾರಿ ಮಲ್ಪೆಯ ಬಂದರಿನ ಸಮೀಪದಲ್ಲಿಯೇ ಕೊರೆತ ಸಂಭವಿಸಿದ್ದು, ಮಳೆ ಮುಂದುವರಿದರೆ ಇನ್ನೂ ಕೊರೆತ ಹೆಚ್ಚಾಗುವ ಭೀತಿ ಇದೆ.
ಸಮುದ್ರದಲ್ಲಿ ಭಾರಿ ಗಾಳಿ ಬೀಸುತ್ತಿದ್ದು ಭಾರಿ ಗಾತ್ರದ ಅಲೆಗಳು ದಡಕ್ಕೆ ಹೊಡೆಯುತ್ತಿವೆ. ಜತೆಗೆ ಸಮುದ್ರದಲ್ಲಿರುವ ಕಲ್ಮಶಗಳು ಕೂಡ ದಡ ಸೇರುತ್ತಿವೆ. ನೀರಿನ ಬಣ್ಣ ಕೂಡ ಕಪ್ಪು ಆಗಿದ್ದು, ಇದು ಇನ್ನಷ್ಟು ಅಪಾಯದ ಸಂಕೇತವಾಗಿದೆ ಎನ್ನುತ್ತಾರೆ ಮಲ್ಪೆಯ ಹಿರಿಯ ಅನುಭವಿ ಮೀನುಗಾರರು.
ರಸ್ತೆಗೆ ಚಾಚಿದ ಅಲೆಗಳು: ಮಲ್ಪೆಯ ಟೆಬ್ಮಾ ಶಿಪ್ ಯಾರ್ಡ್‌ನ ಹಿಂಭಾಗದಲ್ಲಿ ಸುಮಾರು 800 ಮೀಟರುಗಳಷ್ಟು ಉದ್ದಕ್ಕೆ ಕೊರೆತ ಆರಂಭವಾಗಿದೆ. ಸೋಮವಾರ ಸಮುದ್ರ ಸುಮಾರು 50 ಮೀಟರಿನಷ್ಟು ಮುಂಚಾಚಿದ್ದು, ಸ್ಥಳೀಯ ಭಜನಾ ಮಂದಿರದವರು ಪ್ರವಾಸಿಗರ ಉಪಯೋಗಕ್ಕಾಗಿ ಹಾಕಿದ್ದ ಹತ್ತಾರು ಸಿಮೆಂಟ್ ಕುರ್ಚಿಗಳು ಸಮುದ್ರ ಪಾಲಾಗಿದ್ದವು. ಇದೀಗ ಸಮುದ್ರ ಅಲ್ಲಿಂದಲೂ ಸುಮಾರು 50 ಮೀಟರಿನಷ್ಟು ಮುಂದಕ್ಕೆ ಬಂದಿದ್ದು, ಹತ್ತಾರು ವರ್ಷಗಳ ಹಿಂದೆ ನೆಟ್ಟಿದ್ದ ಹತ್ತಾರು ಮರಗಳು ಸಮುದ್ರ ಪಾಲಾಗಿವೆ. ಬುಧವಾರ ರಸ್ತೆಗೆ ಅಲೆಗಳು ಚಾಚಿಕೊಂಡಿವೆ. ಇಲ್ಲಿನ ಮೀನುಗಾರರ ಪ್ರಕಾರ ಪ್ರಥಮ ಬಾರಿಗೆ ಇಲ್ಲಿ ಕೊರೆತ ಸಂಭವಿಸಿದೆ.
ಮಟ್ಟು ಗ್ರಾಮದ ಭಜನಾ ಮಂದಿರದ ಬಳಿ ಸುಮಾರು 150 ಮಿ. ನಷ್ಟು ಉದ್ದಕ್ಕೆ ಕಡಲ್ಕೊರೆತ ಉಂಟಾಗಿ ರಾಜು ಕೋಟ್ಯಾನ್‌ಗೆ ಸೇರಿದ ತೆಂಗಿನ ಮರಗಳು ಕೊಚ್ಚಿ ಹೋಗಿವೆ. ಇಲ್ಲೇ ಬಳಿ ಇರುವ ಸ್ಮಶಾನದ ಆವರಣ ಗೋಡೆ ಕೂಡ ಕುಸಿದುಬಿದ್ದಿದೆ. ಪಡುಬಿದ್ರಿಯ ಕಾಡಿಪಟ್ನ ಎಂಬಲ್ಲಿ ಸುಮಾರು 50 ಮೀಟರ್  ಉದ್ದಕ್ಕೆ ಮೀನುಗಾರಿಕಾ ರಸ್ತೆ ಸಂಪೂರ್ಣವಾಗಿ ನಾಶವಾಗಿ ಸಂಪರ್ಕವೇ ಕಡಿದು ಹೋಗಿದೆ.
ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ ಕಡಲ್ಕೊರೆತ ಜಾಸ್ತಿಯಾಗಿದ್ದು, ಇಲ್ಲಿನ ನಾಲ್ಕೈದು ಮನೆಗಳು ಅಪಾಯದ ಅಂಚಿನಲ್ಲಿವೆ. ಉದ್ಯಾವರ ಪಡುಕರೆಯಲ್ಲಿಯೂ ಕೊರೆತ ಆರಂಭವಾಗಿದ್ದು, ಸಮುದ್ರದ ಉಪ್ಪು ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಈ ಎಲ್ಲಾ ಪ್ರದೇಶಗಳಲ್ಲಿ ಈಗಾಗಲೇ ಬಂಡೆಕಲ್ಲುಗಳನ್ನು ತಂದು ಸುರಿಯಲಾಗುತ್ತಿದೆ, ಆದರೆ ರಾಕ್ಷಸಾಕಾರದ ಅಲೆಗಳಿಗೆ ಈ ಕಲ್ಲುಗಳು ಲೆಕ್ಕಕ್ಕಿಲ್ಲದಂತೆ ಸಮುದ್ರದ ತಳ ಸೇರುತ್ತಿವೆ.
ಈಗಾಗಲೇ ಕಾಡಿಪಟ್ಣ, ತೆಂಕಎರ್ಮಾಳು, ಮಟ್ಟು ಗ್ರಾಮಗಳಲ್ಲಿ 25ಕ್ಕೂ ಹೆಚ್ಚು ತೆಂಗಿನ ಮರಗಳು, ನಾಲ್ಕೈದು ವಿದ್ಯುತ್ ಕಂಬಗಳು ಸಮುದ್ರಕ್ಕೆ ಉರುಳಿವೆ. ಇನ್ನಷ್ಟು ಉರುಳುವ ನಿರೀಕ್ಷೆಯಲ್ಲಿವೆ. ಕಾರ್ಕಳ ತಾಲೂಕಿನ ನೀರೆ ಗ್ರಾಮದ ಅಪ್ಪಿ ಶೆಡ್ತಿ ಮನೆಯ ಗೋಡೆ ಕುಸಿದು 3 ಸಾವಿರ ನಷ್ಟ ಉಂಟಾಗಿದೆ. ಮುಡಾರು ಗ್ರಾದ ಬಾಗಿಹರಿಜನ ಅವರ ಮನೆ ಕುಸಿದು 25 ಸಾವಿರ ನಷ್ಟ ಸಂಭವಿಸಿದೆ.
ಮಳೆ ವಿವರ: ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ವರೆಗೂ 24 ಗಂಟೆಗಳಲ್ಲಿ ಸರಾಸರಿ 56.60 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ 38.02 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 84.80 ಮಿ.ಮೀ, ಕುಂದಾಪುರ ತಾಲೂಕಿನಲ್ಲಿ 47.00 ಮಿ.ಮೀ. ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement