ಕಿನ್ನಿಗೋಳಿ: ದೊಡ್ಡರಂಗೇಗೌಡಗೆ ದಿ.ಕೊ.ಅ. ಉಡುಪ ಪ್ರಶಸ್ತಿ ಪ್ರದಾನ
ಮೂಲ್ಕಿ: ಕಿನ್ನಿಗೋಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯದ ಮೂಲಕ ಕನ್ನಡ ಕಂಪನ್ನು ರಾಜ್ಯಾದ್ಯಂತ ಪಸರಿಸುವಲ್ಲಿ ಕೊಡೆತ್ತೂರು ಅನಂತಪದ್ಮನಾಭ ಉಡುಪರ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ಸಾಹಿತಿ ಡಾ. ದೊಡ್ಡರಂಗೇ ಗೌಡ ಹೇಳಿದ್ದಾರೆ.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ 'ಯುಗಪುರುಷ' ಸಂಸ್ಥಾಪಕ ದಿ.ಕೊ.ಅ. ಉಡುಪ ಸಂಸ್ಮರಣಾ ಸಮಾರಂಭದಲ್ಲಿ ದಿ.ಕೊ.ಅ. ಉಡುಪ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ನಿವೃತ್ತ ಉಪನ್ಯಾಸಕ ಶಿವಾನಂದ ಕಾರಂತ ಸಂಸ್ಮರಣಾ ಭಾಷಣಗೈದರು. ಬೆಳ್ಮಣ್ನ ವೇದಮೂರ್ತಿ ವಾಸುದೇವ ತಂತ್ರಿ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ 'ಕುಂದಪ್ರಭ' ಸಂಪಾದಕ ಯು.ಎಸ್. ಶೆಣೈ ಅವರು ಬಿಣಗಾದ ಅನಂತ ಚಿಂತಾಮಣಿ ಜ್ಯೋತಿಷಿ ರಚಿಸಿದ 'ಮಕ್ಕಳಿಗಾಗಿ ಕಥೆಗಳು' ಕೃತಿಯನ್ನು ಹಾಗೂ ಹಿರಿಯ ಸಾಹಿತಿ ಕೆ.ಜಿ. ಮಲ್ಯ ಅವರು ಮಿತ್ತಬೈಲು ಪಳಕಳ ಸೀತಾರಾಮ ಭಟ್ಟ ರಚಿತ 'ಕತ್ತಲ ರಾಜ್ಯ-ಹಾರುವ ಪ್ರಜೆಗಳು' ಕೃತಿ ಬಿಡುಗಡೆಗೊಳಿಸಿದರು.
ಶ್ರೀಕ್ಷೇತ್ರ ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವದಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿದ್ದರು. ಹಿರಿಯ ಸಾಹಿತ್ಯ ಸಂಘಟಕ ಮಂಗಳೂರಿನ ಕೆ.ಪಿ. ಮಲ್ಯರನ್ನು ಗೌರವಿಸಲಾಯಿತು.
ಪರಿಸರದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು. ಅನಂತ ಉಡುಪ, ಪದ್ಮನಾಭ ಉಡುಪ ಮತ್ತಿತರರು ಇದ್ದರು.
ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ ಸ್ವಾಗತಿಸಿದರು. ಇ. ಶ್ರೀನಿವಾಸ್ ಭಟ್ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 'ಲಕ್ಷ್ಮೀ ಸ್ವಯಂವರ- ಅಮೃತೋದ್ಭವ ಹಾಗೂ ಶ್ರೀನಿವಾಸ ಕಲ್ಯಾಣ' ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.