ತೆಂಕ ಎರ್ಮಾಳು: 7 ಕುಟುಂಬ ಸ್ಥಳಾಂತರ
ಪಡುಬಿದ್ರಿ: ಇಲ್ಲಿನ ತೆಂಕ ಎರ್ಮಾಳು ಗ್ರಾಮದಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದ್ದು, ಅಪಾಯಕ್ಕೊಳಗಾಗುವ ಸಾಧ್ಯತೆಗಳಿರುವ 7 ಕುಟುಂಬಗಳನ್ನು ತೆರವುಗೊಳಿಸಲಾಗಿದ್ದು, ಅವರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ. ಇಲ್ಲಿನ ಮೀನುಗಾರಿಕಾ ರಸ್ತೆಯನ್ನು ಸಮುದ್ರ ಕಬಳಿಸಿದ್ದು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ.
ಡಿಸಿ, ಜಿ.ಪಂ.ಅಧ್ಯಕ್ಷ ಭೇಟಿ: ಬುಧವಾರ ಸಂಜೆ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಮತ್ತು ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊರೆತ ತಾತ್ಕಾಲಿಕವಾಗಿ ತಡೆಯಲು ಇನ್ನಷ್ಟು ಬಂಡೆ ಕಲ್ಲುಗಳನ್ನು ತಂದು ಸಮುದ್ರ ತೀರದಲ್ಲಿ ಸುರಿಯಲು ಬಂದರು ಮತ್ತು ಮೀನುಗಾರಿಕಾ ಅಧಿಕಾರಿಗಳಿಗೆ ಆದೇಶಿಸಿದರು. ಇಲ್ಲಿನ ಗಂಗಾಧರ ಸುವರ್ಣ ಎಂಬವರ ಮನೆ ಬಳಿ ಅವರ 10 ತೆಂಗಿನ ಮರ ಸಮುದ್ರ ಪಾಲಾಗಿ 30 ಮೀ. ಉದ್ದಕ್ಕೆ ಡಾಂಬರು ಮೀನುಗಾರಿಕಾ ರಸ್ತೆಯನ್ನು ಸಮುದ್ರ ಕಬಳಿಸಿದೆ. ತೊಟ್ಟಂ ಎಂಬಲ್ಲಿಯೂ ರಸ್ತೆ ಸಂಪರ್ಕ ಕಡಿದಿದೆ. ಇಲ್ಲಿಯೇ ಸಮೀಪದ ವಿಶ್ವನಾಥ, ಚಂದ್ರಶೇಖರ ಸುವರ್ಣ ಮತ್ತು ಇತರ 5 ಕುಟುಂಬಗಳ ಮನೆಗಳು ಅಪಾಯಕ್ಕೆ ಸಿಲುಕಿದ್ದು, ಕಂದಾಯ ಅಧಿಕಾರಿಗಳು ಸಾಕಷ್ಟು ಪ್ರಯತ್ನಪಟ್ಟು ಈ 7 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಅವರಿಗೆ ತೆಂಕ ಮೊಗವೀರ ಸಭಾ ಭವನದಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ. ಅಲ್ಲದೆ ಹತ್ತಿರದ ಸುಂದರ ಸುವರ್ಣ, ಲಿಂಗಪ್ಪ ಪುತ್ರನ್ ಎಂಬವರ ಮನೆ ಸಹಿತ ಇನ್ನೂ 6 ಮನೆಗಳು ಅಪಾಯ ಸ್ಥಿತಿಯಲ್ಲಿದೆ. ಜಿಲ್ಲಾಧಿಕಾರಿಯೊಂದಿಗೆ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಮು.ಕಾ.ನಿ. ಅಧಿಕಾರಿ ಪ್ರಭಾಕರ ಶರ್ಮ, ಮೀನುಗಾರಿಕಾ ಇಲಾಖೆಯ ಎಂ.ಎನ್. ಖಾರ್ವಿ, ತಹಸೀಲ್ದಾರ್ ಗುರುರಾಜ್, ತಾಪಂ ಸದಸ್ಯೆ ಸುಮನಾ ಕಿಶೋರ್, ಗ್ರಾಪಂ ಅಧ್ಯಕ್ಷೆ ಜಯಶ್ರೀ ಪೂಜಾರಿ ಇದ್ದರು.