ಮರವಂತೆಯಲ್ಲೂ ಕೊರೆತ
ಕುಂದಾಪುರ: ಮರವಂತೆಯಲ್ಲಿ ಮಂಗಳವಾರ ರಾತ್ರಿಯಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ತೀರದುದ್ದಕ್ಕೆ ಕಡಲ್ಕೊರೆತ ತೀವ್ರವಾಗಿದೆ. ಬುಧವಾರ ಇಲ್ಲಿ ತೆರೆದ ಮೀನುಗಾರಿಕಾ ಬಂದರು ನಿರ್ಮಾಣವಾಗುತ್ತಿರುವ ಪ್ರದೇಶದ ಬಳಿ ತೆರೆಗಳ ಅಬ್ಬರ ಹೆಚ್ಚಿದ್ದು, ಸಮುದ್ರಕ್ಕೆ ಸಮಾನಾಂತರವಾಗಿರುವ ಕರಾವಳಿ ಮಾರ್ಗಕ್ಕೆ ಅಪಾಯ ಎದುರಾಗಿದೆ. ಅದರಲ್ಲೂ ಒಂದಷ್ಟು ದೂರ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿರುವ ಸ್ಥಳದಲ್ಲಿ ರಸ್ತೆ ಬದಿಯ ರಕ್ಷಣಾ ಗೋಡೆ ಸಮುದ್ರ ಪಾಲಾಗಿದೆ. ತೆರೆಗಳು ಇನ್ನಷ್ಟು ಮುಂದಕ್ಕೆ ಬಂದರೆ ರಸ್ತೆ ಕಡಿದು ಹೋಗುವ ಸಾಧ್ಯತೆ ಇದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯರು, ಅಧಿಕಾರಿಗಳು ತೆರಳಿ ಪರಿಶೀಲಿಸಿದರು. ಅವರು ಬೆಂಗಳೂರಿನಲ್ಲಿರುವ ಶಾಸಕರಿಗೆ ಮತ್ತು ಉಡುಪಿ ಜಿಲ್ಲಾಧಿಕಾರಿಗೆ ಪರಿಸ್ಥಿತಿ ವಿವರಿಸಿದ್ದು, ಜಿಲ್ಲಾಧಿಕಾರಿ ಸಂಬಂಧಿಸಿದ ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕಳುಹಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ನಡುವೆ ಇಲ್ಲಿನ ಬಂದರು ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಪ್ರತಿನಿಧಿ ಶರವಣನ್ ಗ್ರಾ.ಪಂ.ನ ಕೋರಿಕೆ ಅನುಸರಿಸಿ ತೀವ್ರ ಕೊರೆತಕ್ಕೀಡಾದ ಪ್ರದೇಶದಲ್ಲಿ ಕಲ್ಲುಗಳನ್ನು ಸುರಿದು, ರಸ್ತೆಗೆ ತಾತ್ಕಾಲಿಕ ರಕ್ಷಣೆ ಒದಗಿಸಿದ್ದಾರೆ.