ಯೋಜನೆ ವಿರುದ್ಧ ಸಮಿತಿ ಚಳವಳಿ
ಉಡುಪಿ: ಜಿಲ್ಲೆಯಲ್ಲಿ ಹಿಂದೆ ತಾವು ಬೆಂಬಲಿಸಿದ್ದ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಉಷ್ಣ ವಿದ್ಯುತ್ ಸ್ಥಾವರದಿಂದ ಸುತ್ತಲಿನ ಪರಿಸರ, ಜನಜೀವನಕ್ಕೆ ಭಾರಿ ತೊಂದರೆಯಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ನಾವು ಇದೀಗ ಪಕ್ಕದ ದ.ಕ. ಜಿಲ್ಲೆಯ ನಿಡ್ಡೋಡಿಯಲ್ಲಿ ಸ್ಥಾಪಿಲುದ್ದೇಶಿಸಿರುವ ಇನ್ನೊಂದು ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಚಳುವಳಿ ನಡೆಸಲು ನಿರ್ಧರಿಸಿರುವುದಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ತಿಳಿಸಿದೆ.
ಇತ್ತೀಚೆಗೆ ಮುಂಬೈನಲ್ಲಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಎಚ್. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಅದರಿಂದಾಗುವ ಸಾಧಕ- ಭಾದಕಗಳ ಬಗ್ಗೆ ಚರ್ಚಿಸಿ, ಸರ್ವ ಸದಸ್ಯರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು, ಈ ಯೋಜನೆ ಕೈಬಿಡುವಂತೆ ಸರ್ಕಾರ, ರಾಜಕೀಯ ಮುಖಂಡರಲ್ಲಿ ಮನವಿ ಮಾಡುವುದು ಹಾಗೂ ಈ ಯೋಜನೆ ವಿರೋಧಿಸುವ ಎಲ್ಲ ಸಂಘಟನೆಗಳನ್ನು ಬೆಂಬಲಿಸುವುದು, ಸಮಿತಿಯ ಅವಿಭಜಿತ ದ.ಕ. ಜಿಲ್ಲಾಧ್ಯಕ ಡಾ.ಬಿ. ಎಂ. ಹೆಗ್ಡೆ ಮತ್ತು ದ.ಕ. ಜಿಲ್ಲಾದ್ಯಕ್ಷ ಫೆಲಿಕ್ಸ್ ಎ. ಡಿಸೋಜಾ ತಾಕೋಡೆ ಮುಂದಾಳತ್ವದಲ್ಲಿ ಸ್ಥಾವರ ವಿರೋಧ ಚಳವಳಿ ಹಮ್ಮಿಕೊಳ್ಳುವುದಾಗಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಉಡುಪಿಯ ಯುಪಿಸಿಎಲ್ ಸ್ಥಾವರದಿಂದ ಪರಿಸರಕ್ಕೆ ಮತ್ತು ಜನರಿಗೆ ಆಗುತ್ತಿರುವ ತೊಂದರೆಗಳ ಪರಿಹಾರೋಪಾಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲೂ ನಿರ್ಣಯಿಸಲಾಯಿತು.
ಸಭೆಯಲ್ಲಿ ಸಮಿತಿಯ ಕೋಶಾಧಿಕಾರಿ ಐ.ಆರ್. ಶೆಟ್ಟಿ, ಉಪಾಧ್ಯಕ್ಷ ಬಾಲಕೃಷ್ಣ ಪಿ. ಭಂಡಾರಿ ಇದ್ದರು.