ಇಸ್ಪೀಟ್ ಜುಗಾರಿ: 8 ಮಂದಿ ಸೆರೆ
ಉಡುಪಿ: ಇಲ್ಲಿನ 76 ಬಡಗಬೆಟ್ಟು ಗ್ರಾಮದ ಬೀಡಿನಗುಡ್ಡೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿದ್ದ 8 ಮಂದಿ ಆರೋಪಿಗಳನ್ನು ಭಾನುವಾರ ಬಂಧಿಸಲಾಗಿದೆ.ಆರೋಪಿಗಳು ಭಾನುವಾರ 76 ಬಡಗಬೆಟ್ಟು ಗ್ರಾಮದ ಬೀಡಿನಗುಡ್ಡೆ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಆಟಕ್ಕೆ ಬಳಸಿದ ಒಟ್ಟು ರು. 7,200 ನಗದು ಹಾಗೂ ಇತರ ಪರಿಕರ ವಶಪಡಿಸಿಕೊಂಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಟ್ವಾಳ: ವ್ಯಕ್ತಿ ಆತ್ಮಹತ್ಯೆ
ಬಂಟ್ವಾಳ: ಪತ್ನಿಯ ನಡವಳಿಕೆಯಿಂದ ಅವಮಾನಿತನಾದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಿಯಂಗಳ ಗ್ರಾಮದಲ್ಲಿ ಸೋಮವಾರ ನಡೆದಿದೆ. ಮೃತರನ್ನು ಕರಿಯಂಗಳ ಗ್ರಾಮದ ಸಾಣೂರು ಪದವು ನಿವಾಸಿ ಬಾಬು ಪೂಜಾರಿ ಎಂದು ಗುರುತಿಸಲಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಬಾಬು ಪೂಜಾರಿಯವರ ಪತ್ನಿ ಮೋಹಿನಿ ಮೂರು ವರ್ಷದ ಮಗಳ ಸಹಿತ ನಾಪತ್ತೆಯಾಗಿದ್ದರು. ಕೆಲ ದಿನಗಳ ಬಳಿಕ ಮೈಸೂರಿನಲ್ಲಿ ಪ್ರಿಯಕರ ನರೇಂದ್ರ ಎಂಬಾತನ ಜೊತೆ ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷದ ತೀವ್ರತೆಯಿಂದಾಗಿ ಮೋಹಿನಿ ಮೃತಪಟ್ಟಿದ್ದು, ನರೇಂದ್ರ ಹಾಗೂ ಮಗು ಬದುಕಿದ್ದರು. ಈ ಘಟನೆಯಿಂದಾಗಿ ಬಾಬು ಪೂಜಾರಿ ನೊಂದಿದ್ದು, ಅವಮಾನಗೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಬಾಬು ಪೂಜಾರಿಯವರ ಸಹೋದರ ಭಾಸ್ಕರ ಪೂಜಾರಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.