ಧರ್ಮ ಭಯವಿದ್ದಲ್ಲಿ ದಂಡಸಂಹಿತೆ ಬೇಕಾಗಿಲ್ಲ; ರಾಘವೇಶ್ವರ ಶ್ರೀ
ವಿಟ್ಲ: ಧರ್ಮವೆಂಬುದರ ಭಯ ತ್ರೇತಾಯುಗದಲ್ಲಿತ್ತು. ಆದುದರಿಂದ ಕೋರ್ಟ್, ಸೇನೆ ಎಂಬ ದಂಡ ಸಂಹಿತೆಗಳ ಅಗತ್ಯವೇ ಆಗ ಇರಲಿಲ್ಲ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಶ್ರೀಗಳ 20ನೇ ವಿಜಯ ಚಾತುರ್ಮಾಸ್ಯದ ಅಂಗವಾಗಿ ಮಾಣಿಯ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ರಾಮಕಥಾ ಸರಣಿಗೆ ಭಾನುವಾರ ಚಾಲನೆ ದೊರಕಿದ್ದು, ಸ್ವಾಮೀಜಿ ಪ್ರವಚನ ನೀಡಿದರು.
ತ್ರೇತಾಯುಗದ ಕಥೆ ಈ ಕಲಿಯುಗಕ್ಕೆ ತುಂಬಾ ಹತ್ತಿರವಾಗಿದೆ. ರಾಮನನ್ನು ಬಿಟ್ಟು ಹನುಮನಿಲ್ಲ, ಹನುಮನನ್ನು ಬಿಟ್ಟು ರಾಮನಿಲ್ಲ. ಇವರಿಬ್ಬರನ್ನೂ ಬಿಟ್ಟು ನಾವಿಲ್ಲ ಎಂದು ಸ್ವಾಮೀಜಿ ಹೇಳಿದರು.
ಹನುಮನ ಹುಟ್ಟೂರು ಕರ್ನಾಟಕ. ಗೋಕರ್ಣದಲ್ಲಿ ಆಂಜನೇಯನ ಮೂಲರೂಪವಿದೆ. ಹನುಮ ಹುಟ್ಟಿದ್ದು ದಕ್ಷಿಣದಲ್ಲಾದರೂ ಆತನ ಸೇವೆ ಮಾತ್ರ ಉತ್ತರಕ್ಕೆ ಎಂದು ಸ್ವಾಮೀಜಿ ಹೇಳಿದರು.
ಕಥೆ, ಚಿತ್ರ, ಗಾನ ವೈಭವ: ಒಂದು ಕಡೆಯಿಂದ ಸ್ವಾಮೀಜಿ ಹನುಮನ ಕಥೆ ಹೇಳಿದರೆ ಅದಕ್ಕೆ ಪೂರಕವಾಗಿ ಹಾಡುಗಳು, ಚಿತ್ರ ರಚನೆ ದೃಶ್ಯ ನೋಡುಗರನ್ನು ಭಾವಪರವಶರನ್ನಾಗಿಸಿತು.
ರಾಮ ಕಥಾದಲ್ಲಿ ಸ್ವಾಮೀಜಿ ಪ್ರವಚನಕ್ಕೆ ಪೂರಕವಾಗಿ ಸುಮಧುರ ಗಾಯನವನ್ನು ಕಥೆಗೆ ತಕ್ಕ ಹಾಗೆ ಹಾಡುತ್ತಿದ್ದರು. ಹಾಡಿಗೆ ಒಪ್ಪುವಂತಹ ಚಿತ್ರಗಳನ್ನು ಸಮಯೋಚಿತವಾಗಿ ಬಿಡಿಸುತ್ತಿದ್ದವರು ನೀರ್ನಳ್ಳಿ ಗಣಪತಿ.
ಬಣ್ಣಗಳು, ಸ್ಪಾಂಜ್, ಬ್ರಶ್ಗಳು ಮತ್ತು ನೂಲಿನ ಸಹಾಯದಿಂದ ಹನುಮನಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದರು.
ಗಾಯನದಲ್ಲಿ ಶ್ರೀಪಾದ ಭಟ್ ಕಡತೋಕ, ಸತ್ಯಜಿತ್ ಕೋಲ್ಕೊತ್ತಾ, ಟಿ.ವಿ. ಗಿರಿ, ದೀಪಿಕಾ ಭಟ್, ಸಾಕೇತ್ ಶರ್ಮ, ಸುಭದ್ರಾ ಸಹಕರಿಸಿದರು. ಕೊಳಲಿನಲ್ಲಿ ಗಣೇಶ್ ಕೆ.ಎಸ್., ಸಿತಾರ್ನಲ್ಲಿ ಸುಬ್ರಹ್ಮಣ್ಯ ಹೆಗಡೆ, ತಬಲಾದಲ್ಲಿ ಗಣೇಶ್ ಗುಂಡ್ಕಲ್ ಸಹಕರಿಸಿದರು.
ರೂಪಕಗಳು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ನಿರ್ದೇಶನದಲ್ಲಿ ಮೂಡಿಬಂದವು.
ಹನುಮನ ಜನನ ವಿಶ್ವ ರೂಪ ದರ್ಶನದ ಮೂಲಕ ಮೊದಲ ದಿನದ ಕಥೆ ಮುಕ್ತಾಯವಾಯಿತು.
ಸಾಮೂಹಿಕ ನೃತ್ಯ: ಕಾರ್ಯಕ್ರಮದ ಕೊನೆಗೆ 'ಜೈ ಜೈ ರಾಮ ಕಥಾ...' ಗಾಯನದ ಮೂಲಕ ಸರ್ವರೂ ಸಾಮೂಹಿಕ ನೃತ್ಯ ಮಾಡಿದರು.
ಸುಮಾರು 5 ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡರು.
ವಡೆ ಕಣಜ ಸೇವೆ: ಭಾನುವಾರ ಬೆಳಗ್ಗೆ ಪೆರಾಜೆ ರಾಮಚಂದ್ರಾಪುರ ಮಠದಲ್ಲಿರುವ ಹನುಮಂತನಿಗೆ ವಡೆ ಕಣಜ ಸೇವೆ ನಡೆಯಿತು. ಇದು ಉತ್ತರಭಾರತದಲ್ಲಿ ಮಾತ್ರ ಪ್ರಸಿದ್ಧಿಯಲ್ಲಿರುವ ಒಂದು ವಿಶಿಷ್ಟ ಸೇವೆ. ಈ ಸೇವೆಯನ್ನು ಸ್ವಾಮೀಜಿ ಮಾರ್ಗದರ್ಶನದಂತೆ ನಡೆಸಲಾಯಿತು.
ಆಂಜನೇಯನ ವಿಗ್ರಹದ ಸುತ್ತ ಕಬ್ಬಿನ ಮಂಟಪ ರಚಿಸಿ ಸುಮಾರು 70 ಕಿಲೋ ಹಿಟ್ಟಿನಿಂದ ತಯಾರಿಸಲಾದ ವಡೆಯನ್ನು ದೇವರಿಗೆ ಹೊದಿಸಲಾಯಿತು.