ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮಣಿಪಾಲ್ ರೇಪ್ ಕೇಸ್: ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ

Vishwanath S
Updated On : 29 Jul 2013, 11:46 am

ಉಡುಪಿ: ಮಣಿಪಾಲ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ನಡೆದು ತಿಂಗಳಾಯಿತು. ಆದರೂ, ಆರೋಪಿಗಳನ್ನು ವೈಜ್ಞಾನಿಕವಾಗಿ ಗುರುತಿಸಲು ಬೆಂಗಳೂರಿನ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಲಾಗುತ್ತಿರುವ ಆರೋಪಿಗಳ ಡಿಎನ್‌ಎ ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಏತನ್ಮಧ್ಯೆ, ಸೋಮವಾರ ಆರೋಪಿಗಳ ನ್ಯಾಯಾಂಗ ಬಂಧನವನ್ನು 3ನೇ ಬಾರಿಗೆ ವಿಸ್ತರಿಸಲಾಗಿದೆ. ಜೂ. 20ರಂದು ಮಧ್ಯರಾತ್ರಿ ಮಣಿಪಾಲದಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಆಟೋ ಚಾಲಕರಾದ ಯೋಗೀಶ್ ಪೂಜಾರಿ ಯಾನೆ ಅಮ್ಲೇಟ್ ಯೋಗೀಶ್, ಹರಿಪ್ರಸಾದ್ ಪೂಜಾರಿ ಮತ್ತು ಆನಂದ ಪಾಣಾರ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾಗಿ ಆರೋಪಿಸಲಾಗಿದೆ. ಈ  ಆರೋಪಿಗಳನ್ನು ಜೂ. 17ರಂದು ಬಂಧಿಸಲಾಗಿತ್ತು.  ಅತ್ಯಾಚಾರಕ್ಕೊಳಗಾದ ವೈದ್ಯ ವಿದ್ಯಾರ್ಥಿನಿ ಆರೋಪಿಗಳನ್ನು ಗುರುತಿಸಲು ಒಪ್ಪದ ಹಿನ್ನೆಲೆಯಲ್ಲಿ ಆರೋಪಿಗಳ ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.  ಅದಕ್ಕಾಗಿ ಆರೋಪಿಗಳ ರಕ್ತದ ಮಾದರಿ, ಅತ್ಯಾಚಾರಕ್ಕೊಳಗಾದ ಯುವತಿಯ ದೇಹದ ಮೇಲೆ ಸಿಕ್ಕಿದ ಆರೋಪಿಗಳ ವೀರ್ಯ, ಕೂದಲು ಇತ್ಯಾದಿಗಳನ್ನು ಬೆಂಗಳೂರಿನ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈಗಾಗಲೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ಬಾರಿ ಪೊಲೀಸ್ ವಶಕ್ಕೆ ಮತ್ತು 2 ಬಾರಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ಮತ್ತೆ ತನಿಖಾಧಿಕಾರಿ ಮಣಿಪಾಲದ ಎಸೈ ಸದಾನಂದ ತಿಪ್ಪಣ್ಣನವರ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚವರಿ ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗಜ್ಯೋತಿ ಅವರು ಆರೋಪಿಗಳಿಗೆ ಆ.12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement