ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಗುಟ್ಕಾ ನಿಷೇಧದಿಂದ ಅಡಕೆ ಬೆಳೆಗಾರರು ಬೀದಿಪಾಲು: ಸಂಜೀವ ಮಠಂದೂರು

Vishwanath S
Updated On : 2 Jun 2013, 12:14 pm

ಪುತ್ತೂರು: ಹೊಸದಾಗಿ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡದೆ ಗುಟ್ಕಾ ನಿಷೇಧಕ್ಕೆ ಏಕಾಏಕಿ ಕ್ರಮ ಕೈಗೊಂಡಿದೆ. ಅಡಕೆ ಬೆಳೆಗಾರರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಕ್ಯಾಂಪ್ಕೋ ನಿರ್ದೇಶಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಅವರು ಶನಿವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ಭಾಗದ 7 ಮಂದಿ ಕಾಂಗ್ರೆಸ್ ಶಾಸಕರು ಗುಟ್ಕಾ ನಿಷೇಧದ ಬಗ್ಗೆ ಚಕಾರ ಎತ್ತಲಿಲ್ಲ. ಜಿಲ್ಲೆಯ ಆರೋಗ್ಯ ಸಚಿವರೇ ಮುಂದೆ ನಿಂತು ಗುಟ್ಕಾ ನಿಷೇಧಿಸಿದ್ದಾರೆ. ಆದರೆ ಮಹಾರಾಷ್ಟ್ರ, ಅಸ್ಸಾಂ, ಕೇರಳಗಳಲ್ಲಿ ನಿಷೇಧ ಮಾಡಲಾಗಿಲ್ಲ. ಗುಟ್ಕಾದಲ್ಲಿ ನಿಕೋಟಿನ್ ಇದೆ. ಕ್ಯಾನ್ಸರ್ ಲಕ್ಷಣ ಇದೆ ಎಂದು ಸಚಿವ ಸಂಪುಟ ಏಕಾಏಕಿ ನಿಷೇಧಕ್ಕೆ ತೀರ್ಮಾನಿಸಿದೆ. ಇದರಿಂದಾಗಿ ಅಡಕೆ ಬೆಳೆಗಾರರಿಗೆ ತೊಂದರೆಯಾಗಿದೆ. ಅಡಕೆ ಬೆಳಗಾರರ ಹಿತದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಬಗ್ಗೆ ಸರ್ಕಾರ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು. ನಮ್ಮಲ್ಲಿ ಒಟ್ಟು 68,938 ಎಕರೆ ಪ್ರದೇಶದಲ್ಲಿ 49,323 ಟನ್ ಅಡಕೆ ಬೆಳೆಯಲಾಗುತ್ತದೆ. ಇದರಿಂದಾಗಿ ರೈತರಿಗೆ ಸುಮಾರು 1 ಸಾವಿರ ಕೋಟಿ ಆದಾಯವಿದೆ. ಕೆಂಪು ಅಡಕೆ, ಬಿಳಿ ಅಡಕೆಗೆ ಉತ್ತರ ರಾಜ್ಯಗಳಲ್ಲಿ ಮಾರುಕಟ್ಟೆಯಿದೆ. ಚಾಲಿ ಅಡಿಕೆ ಜತೆ ಬರುವ ಪಠೋರ, ಚೆಪ್ಪುಗೋಟು, ಕರಿಗೋಟು 20-30 ಇದ್ದು ಗುಟ್ಕಾ ಮಾರುಕಟ್ಟೆಗೆ ಹೋಗುತ್ತದೆ. ಗುಟ್ಕಾ ನಿಷೇಧದಿಂದ ಪಠೋರ, ಕರಿಗೋಟು ಧಾರಣೆ ಕುಸಿಯುತ್ತಿದೆ. ಬಿಳಿಗೋಟು ಕೂಡಾ ಕುಸಿಯುವ ಲಕ್ಷಣ ಕಾಣುತ್ತಿದೆ ಎಂದ ಅವರು ಸರ್ಕಾರದ ನಿರ್ಧಾರ ಪ್ರಮುಖವಾಗಿ ಜಿಲ್ಲೆಯ ಅಡಕೆ ಬೆಳೆಗಾರರ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದರು.
ಅಕ್ಕಿ ಭರವಸೆ ಪೊಳ್ಳು: ಸರ್ಕಾರ ಅಸ್ತಿತ್ವಕ್ಕೆ ಬಂದು 1 ತಿಂಗಳಾಗುತ್ತಿದೆ. 1ನಲ್ಲಿ 30ಕೆ.ಜಿ ಅಕ್ಕಿ ಜೂನ್ 1 ರಿಂದ ನೀಡುವುದಾಗಿ ಹೇಳಿ ಈಗ ಕೇಂದ್ರದಿಂದ ಅಕ್ಕಿ ಬಂದಿಲ್ಲ ಜುಲೈನಿಂದ ಆರಂಭಿಸುತ್ತೇವೆ ಎಂಬ ಹೇಳಿಕೆ ನೀಡುತ್ತಿದೆ. ಜನ ವಿಶ್ವಾಸವಿಟ್ಟು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಏಕ ವ್ಯಕ್ತಿಯು ಕ್ಯಾಬಿನೆಟ್‌ನಲ್ಲಿ ಘೋಷಣೆ ನೀಡಿ ಇದೀಗ ಆರಂಭದ ಪೊಳ್ಳು ಭರವಸೆಯಾಗಿರುವ ಈ ಯೋಜನೆ ಜನರ ನಿರೀಕ್ಷೆಯನ್ನು ಹುಸಿ ಮಾಡಿದೆ ಸಂಜೀವ ಮಠಂದೂರು ಎಂದು ದೂರಿದರು.
ಮಠಗಳ ಸರ್ಕಾರೀಕರಣ ಸರಿಯಲ್ಲ: ಮಠಗಳನ್ನು ಸರ್ಕಾರ ವಶಪಡಿಸಿಕೊಳ್ಳಲು ಮುಂದಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೇಡಿನ ರಾಜಕೀಯ ಎಂದ ಮಠಂದೂರು, ಉಡುಪಿ ಶ್ರೀ ಕೃಷ್ಣಮಠ ಮತ್ತು ಗೋಕರ್ಣ ಮಠ ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಉಡುಪಿ ಶ್ರೀ ಕೃಷ್ಣ ಮಠದ ಮೇಲೆ ಮೊದಲೇ ಕಣ್ಣಿತ್ತು. ಗೋಕರ್ಣ ದೇವಳವನ್ನು ಬಿಜೆಪಿ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ನೀಡಿದ್ದು ಇದೀಗ ರಾಜಕೀಯ ಸೇಡಿನಿಂದ ಸರ್ಕಾರ ವಶಕ್ಕೆ ಮುಂದಾಗುತ್ತಿದೆ ಎಂದು ಆರೋಪಿಸಿದರು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ಐಷಾರಾಮದ ಬದುಕಿಗಾಗಿ ಮಿನಿವಿಧಾನ ಸೌಧದಲ್ಲಿ ಕೊಠಡಿ ಕೇಳುತ್ತಿರುವ ಶಾಸಕಿಯವರು ಹಿಂದಿನ ಶಾಸಕಿಯವರನ್ನು ಅಡುಗೆ ಕೋಣೆಯಿಂದ ಬಂದವರು ಎಂದು ಟೀಕಿಸುತ್ತಿದ್ದಾರೆ. ಶಾಸಕರ ಈ ಧೋರಣೆ ಮುಂದುವರಿದಲ್ಲಿ ಬಿಜೆಪಿ ವತಿಯಿಂದ ಬೀದಿಗಿಳಿದು ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು. ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ,ಪ್ರಧಾನ ಕಾರ್ಯದಶರ್ ರಾಜೀವ್ಭ್‌ಂಡಾರಿ, ಮಾಧ್ಯಮ ಪ್ರಮುಖ ಆರ್.ಸಿ ನಾರಾಯಣ, ಯುವ ಮೋಚರಾ ಅಧ್ಯಕ್ಷ ಜಗದೀಶ ಪುಣಚ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement