ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ, ಕಾಂಪೌಂಡ್ ಕುಸಿದು ಹಾನಿ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶನಿವಾರ ಮಳೆಯ ಇರವು ಮುಂದುವರಿದಿದೆ, ಮಂಗಳೂರು ನಗರದಲ್ಲಿ ಶುಕ್ರವಾರ ಮರೆಯಾಗಿದ್ದ ಮಳೆ ಮರುದಿನ ಮತ್ತೆ ಆಗಮಿಸಿದೆ. ಗ್ರಾಮಾಂತರ ಪ್ರದೇಶಗಳ ಅಲ್ಲಲ್ಲಿ ಮುಂಜಾನೆ ವರೆಗೆ ತುಂತುರು ಮಳೆ ಹನಿಯುತ್ತಲೇ ಇತ್ತು. ನಗರದಲ್ಲಿ ಮಧ್ಯಾಹ್ನ ಮಳೆ ಬಂದುಹೋದರೆ, ಸಂಜೆ ವೇಳೆಗೆ ಆಗಸದಲ್ಲಿ ಮೋಡ ಕಾಣಿಸಿತ್ತು. ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಗರಿಷ್ಠ 52.4 ಮಿಲಿ ಮೀಟರ್ ಮಳೆ ದಾಖಲಾಗಿದೆ. ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯ 3 ಗೇಟ್ಗಳನ್ನು ತೆರೆವುಗೊಳಿಸಲಾಗಿದೆ. ಜಿಲ್ಲೆಯ ಬಂಟ್ವಾಳದಲ್ಲಿ 30 ಮಿಲಿ ಮೀಟರ್, ಪುತ್ತೂರು 33.6 ಮಿ.ಮೀ, ಬೆಳ್ತಂಗಡಿ 50.4 ಮಿ.ಮೀ, ಉಪ್ಪಿನಂಗಡಿ 52.4 ಮಿ.ಮೀ, ಸುಳ್ಯ 16.1 ಮಿ.ಮೀ, ಬಜ್ಪೆ 17.8 ಮಿ.ಮೀ ಮಳೆ ದಾಖಲಾಗಿದೆ.
ವಾಹನಗಳಿಗೆ ಹಾನಿ: ಹಿಂದಿನ ದಿನ ಮುಂಜಾನೆ ಸುರಿದ ಮಳೆಗೆ ಚರಂಡಿ ಬ್ಲಾಕ್ ಆಗಿ ಬಿಜೈನಲ್ಲಿ ಕಾಂಪೌಂಡ್ ಕುಸಿತಗೊಂಡು ಕಾರು ಹಾಗೂ ದ್ವಿಚಕ್ರ ವಾಹನ ಹಾನಿಗೀಡಾಗಿದೆ. ಬಿಜೈ 7ನೇ ಕ್ರಾಸ್ನ ಹೊಸ ರಸ್ತೆಯಲ್ಲಿ ಸೀತಾರಾಮ ಎಂಬವರ ಮನೆ ಕಾಂಪೌಂಡ್ ಮಳೆನೀರಿಗೆ ತೊಯ್ದು ಶನಿವಾರ ಮುಂಜಾನೆ ಕುಸಿತಗೊಂಡಿದೆ. ಕಂಪೌಂಡ್ ಬದಿಯ ಚರಂಡಿ ಕಸ ತುಂಬಿ ಬ್ಲಾಕ್ ಆಗಿತ್ತು. ನೀರು ಕಾಂಪೌಂಡ್ ಗೋಡೆ ಬಳಿ ಶೇಖರಣೆಗೊಂಡು ಮಣ್ಣು ಸಡಿಲವಾಗಿ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ.