ನಾಳೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಉದ್ಘಾಟನೆ
ಮಂಗಳೂರು: ತುಂಬೆ ಬಿ.ಎ. ಆಸ್ಪತ್ರೆಯನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಖರೀದಿಸಿದ್ದು, ಜೂ. 2 ರಂದು ಉದ್ಘಾಟನೆಗೊಳ್ಳಲಿದೆ. ಸಂಜೆ 4ಕ್ಕೆ ನಡೆಯುವ ಸಮಾರಂಭದಲ್ಲಿ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸುವರು. ಅರಣ್ಯ ಸಚಿವ ಬಿ. ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ಶಾಸಕ ಜೆ.ಆರ್. ಲೋಬೋ, ಬಿ.ಎ. ಸಂಸ್ಥೆಗಳ ಅಧ್ಯಕ್ಷ ಬಿ. ಅಹ್ಮದ್ ಹಾಜಿ ಮೈದಿನ್ ಪಾಲ್ಗೊಳ್ಳುವರು ಎಂದು ಸಂಸ್ಥೆಯ ಆಡಳಿತಾಧಿಕಾರಿ ಫಾ. ರಿಚರ್ಡ್ ಕುವೆಲ್ಹೊ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಎ ಆಸ್ಪತ್ರೆಯನ್ನು ರು. 18 ಕೋಟಿ ಮೌಲ್ಯಕ್ಕೆ ಖರೀದಿಸಲಾಗಿದೆ. ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತದಲ್ಲಿ ಪ್ರಾರಂಭಗೊಂಡಿರುವ ಆಸ್ಪತ್ರೆಯು ಮಲ್ಟಿ ಸ್ಪೆಶಾಲಿಟಿಯಾಗಿ ಕಾರ್ಯಚರಿಸಲಿದೆ. ಸುಸಜ್ಜಿತ ಹೊರರೋಗಿ ವಿಭಾಗ ಆರಂಭಗೊಂಡಿದ್ದು, ಪ್ರತಿದಿನ ಬೆಳಗ್ಗೆ 8.30 ರಿಂದ ಮಧ್ಯಾಹ್ನ 1ರ ತನಕ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ತಜ್ಞ ವೈದ್ಯರು ಲಭ್ಯವಿರುತ್ತಾರೆ ಎಂದು ತಿಳಿಸಿದರು.
ಸುಪ್ರೀಂ ನಿರ್ದೇಶನದಂತೆ
ಗುಟ್ಕಾ ನಿಷೇಧ: ರಮಾನಾಥ ರೈ
ಪುತ್ತೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕದಲ್ಲಿ ಗುಟ್ಕಾ ನಿಷೇಧ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದಾರೆ.
ಅವರು ಪುತ್ತೂರಿನ ಬಾಲವನಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ದೇಶದ ಸುಮಾರು 20 ರಾಜ್ಯಗಳಲ್ಲಿ ಈಗಾಗಲೇ ಗುಟ್ಕಾ ನಿಷೇಧವಾಗಿದೆ. ಕರ್ನಾಟಕದಲ್ಲೂ ಗುಟ್ಕಾ ನಿಷೇಧ ಮಾಡುವಂತೆ ಸುಪ್ರೀಂಕೋರ್ಟ್ನ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಅನಿವಾರ್ಯ ನಿಷೇಧಿಸಲಾಗಿದೆ. ಇದರಲ್ಲಿ ಅಡಿಕೆ ಬೆಳೆಗಾರರಿಗೆ ಯಾವುದೇ ಹೊಡೆತವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅಡಕೆ ಬೆಳೆಗಾರರಿಗೆ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಮಂಗಳೂರಿನ ಎಸಿಪಿ ದೌರ್ಜನ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಸಂಬಂಧಿಸಿ, ಅಧಿಕಾರಿಯನ್ನು ಈಗಾಗಲೇ ಗೃಹ ಇಲಾಖೆಗೆ ವರ್ಗಾಯಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.