ಹಳಿ ತಪ್ಪಿದ ಗೂಡ್ಸ್ ರೈಲು
ಪಡುಬಿದ್ರಿ: ಪಡುಬಿದ್ರಿ ಸಮೀಪದ ನಂದಿಕೂರು ಬಳಿ ಕೊಂಕಣ ರೇಲ್ವೆಗೆ ಸೇರಿದ ಗೂಡ್ಸ್ ರೈಲೊಂದು ಹಳಿ ತಪ್ಪಿದ ಘಟನೆ ಶನಿವಾರ ಬೆಳಗ್ಗೆ 6.30ರ ಸುಮಾರಿಗೆ ನಡೆದಿದ್ದು, ಅದೃಷ್ಟವಶಾತ್ ದುರಂತ ತಪ್ಪಿದೆ.
ಈ ರೈಲು ಎಲ್ಲೂರಿನಲ್ಲಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸಿ ನವಮಂಗಳೂರು ಬಂದರಿಗೆ ವಾಪಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನೂತನವಾಗಿ ನಿರ್ಮಾಣಗೊಂಡ ನಂದಿಕೂರು ರೈಲು ನಿಲ್ದಾಣದಿಂದ ಸುಮಾರು 200 ಮೀಟರ್ ಅಂತರದಲ್ಲಿ ಕೊಂಕಣ ರೇಲ್ವೆಗೆ ಸೇರಿದ ಗೂಡ್ಸ್ ರೈಲಿನ ಮುಂಭಾಗದ 2 ಎಂಜಿನ್ ಬೋಗಿಗಳು ಹಳಿಯಿಂದ ಕೆಳಗಿಳಿದಿದೆ. ಗೂಡ್ಸ್ ರೈಲಿನ ವೇಗ ಕಡಿಮೆ ಇದ್ದ ಕಾರಣ ಸುಮಾರು 50 ಮೀಟರ್‌ನಷ್ಟು ದೂರ ಚಲಿಸಿ, ನಿಂತಿದೆ. ಈ ಘಟನೆಯಿಂದ ರೈಲು ಹಳಿಗೆ ಹಾನಿಯಾಗಿದೆ. ಹೀಗಾಗಿ ಈ ಹಳಿಯಲ್ಲಿ ಚಲಿಸುವ ಎಲ್ಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಘಟನಾ ಸ್ಥಳಕ್ಕೆ ದಕ್ಷಿಣ ರೇಲ್ವೆಯ ಮಂಗಳೂರು ವಿಭಾಗದ ರೈಲು ದುರಸ್ತಿ ಕಾರ್ಮಿಕರು ಆಗಮಿಸಿ ದುರಸ್ತಿ ಕಾರ್ಯ ಕೈಗೊಂಡರು.