ಬಾಲ್ಯದ ನೆನಪುಗಳು ಖುಷಿ ಕೊಡುತ್ತವೆ: ರವಿಶಂಕರ್ ರಾವ್
ಉಡುಪಿ: ಶೈಕ್ಷಣಿಕ ವರ್ಷಾರಂಭದಲ್ಲಿ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಸನ್ನಿವೇಶ ಅದ್ಭುತವಾಗಿದೆ. ಇಂತಹ ಬಾಲ್ಯದ ನೆನಪುಗಳು ಮುಂದೆ ಜೀವನಪೂರ್ತಿ ಖುಷಿ ಕೊಡುತ್ತವೆ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್ ಹೇಳಿದರು.
ಅವರು ಶುಕ್ರವಾರ ನಂದಳಿಕೆ ಸರ್ಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷವನ್ನು ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಕಿ ಪೂರ್ಣಿಮಾ ಅವರು ಕೊಡಮಾಡಿದ ಸಿಹಿ ತಿಂಡಿಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.
ಮಕ್ಕಳಿಗೆ ಪ್ರೀತಿ ಕೊಟ್ಟಾಗ, ಸ್ಪೂರ್ತಿ ತುಂಬಿದಾಗ, ಓದಿನ ವಾತಾವರಣ ಕಲ್ಪಿಸಿಕೊಟ್ಟಾಗ ಅವರಾಗಿಯೇ ಕಲಿಯುತ್ತಾರೆ. ಮಕ್ಕಳಿಗೆ ತಾಯಿಯ ನಂತರದ ಸ್ಥಾನ ನೀಡುವವರು ಶಿಕ್ಷಕರು ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕ್ಷೇತ್ರ ಸಮನ್ವಯ ಅಧಿಕಾರಿ ಶಿವಾನಂದ ಮಾತನಾಡಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ಯಾವುದೇ ಒತ್ತಡವಿಲ್ಲದೆ ಸ್ವತಂತ್ರವಾಗಿ ಕಲಿಯುವ ಮುಕ್ತ ವಾತಾವರಣವಿದೆ. ಮಕ್ಕಳ ಶಿಕ್ಷಣದ ಬಗ್ಗೆ ತಾಯಿ ತಂದೆಯರ ಜವಾಬ್ದಾರಿ ಹೆಚ್ಚಾಗಿದೆ ಎಂದರು.
ವೇದಿಕೆಯಲ್ಲಿ ಬೆಳ್ಮಣ್ ಗ್ರಾಪಂ ಸದಸ್ಯೆ ಜೋಯ್ ಟೆಲ್ಲಿಸ್, ನಂದಳಿಕೆ ಕ್ಲಸ್ಟರ್ ಸಿ.ಆರ್.ಪಿ. ಪಾಂಡುರಂಗ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣಪತಿ ಕಾಮತ್ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮೀಕಾಂತ್ ಭಟ್ ಸ್ವಾಗತಿಸಿ, ಶಿಕ್ಷಕಿ ಎಮಿಲ್ಡಾ ಪಿಂಟೊ, ಸುಮತಿ ಪೂಜಾರ್ತಿ ಸಹಕರಿಸಿದರು. ವಿದ್ಯಾರ್ಥಿಗಳಿಗೂ ಉಚಿತ ಪುಸ್ತಕ ವಿತರಿಸಿ ಅಭಿನಂದಿಸಿ, ಶಿಕ್ಷಕ ಸದಾನಂದ ಶೆಟ್ಟಿ ವಂದಿಸಿದರು.