ಸುದ್ದಿ ಸಂಕ್ಷೇಪ
ಪಂಚಾಯತ್‌ರಾಜ್ ಉತ್ತೇಜನ ಬಹುಮಾನ: ಪುತ್ತೂರು ತಾ.ಪಂ., ಬೆಟ್ಟಂಪಾಡಿ ಗ್ರಾ.ಪಂ ಆಯ್ಕೆ
ಪುತ್ತೂರು: ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ಪಂಚಾಯಿತಿಗಳ ಸಬಲೀಕರಣ ಮತ್ತು ಉತ್ತರದಾಯಿತ್ವ ಪ್ರೋತ್ಸಾಹ ಯೋಜನೆಯಡಿ ನೀಡುತ್ತಿರುವ 2012-13ನೇ ಸಾಲಿನ ರಾಜ್ಯ ಸರ್ಕಾರದ ಉತ್ತೇಜನ ಬಹುಮಾನಕ್ಕಾಗಿ ಪುತ್ತೂರು ತಾಲೂಕು ಪಂಚಾಯಿತಿ ಮತ್ತು ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ. ಅಧಿಕಾರ ವಿಕೇಂದ್ರೀಕರಣ ಅಥವಾ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಗಮನಾರ್ಹ ಸಾಧನೆ ಪರಿಣಿಸಿ ಈ ಬಹುಮಾನ ನೀಡಲಾಗುತ್ತಿದೆ. ಬಹುಮಾನ ಪುರಸ್ಕೃತ ತಾಲೂಕು ಪಂಚಾಯಿತಿಗೆ ರು. 10 ಲಕ್ಷ ನಗದು ಮತ್ತು ಗ್ರಾಮ ಪಂಚಾಯಿತಿಗೆ ರು. 5 ಲಕ್ಷ ನಗದು ಪ್ರಶಸ್ತಿ ಮೊತ್ತವಾಗಿ ನೀಡಲಾಗುವುದು. ಬಹುಮಾನ ಮೊತ್ತದ ವಿನಿಯೋಗಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪಂಚಾಯಿತಿ ಸಾಮಾನ್ಯಸಭೆ, ಗ್ರಾಮಸಭೆಗಳನ್ನು ಕಾಲಕಾಲಕ್ಕೆ ಸರಿಯಾಗಿ ನಡೆಸಿ, ನಿರ್ಣಯಗಳನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸುವುದು, ವಿವಿಧ ತೆರಿಗೆಗಳ ಸಂಗ್ರಹವನ್ನೂ ಸಮರ್ಪಕವಾಗಿ ಮಾಡುವುದು, ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಅಭಿವೃದ್ಧಿಗೆ ಶ್ರಮ ವಹಿಸುವುದು, ವಿನೂತನ ಯೋಜನೆಗಳ ಸಮರ್ಪಕ ಅನುಷ್ಠಾನ ಇತ್ಯಾದಿ ವಿವಿಧ ಮಾನದಂಡಗಳನ್ನು ಆಧಾರವಾಗಿರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
9ರಂದು ವಿದ್ವಾನ್ ನಾರಾಯಣಗೆ ಅಭಿನಂದನೆ
ಮೂಲ್ಕಿ: ಮೂಲ್ಕಿಯ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯ ಶಾಂಭವಿ ಸಂಗೀತ ನೃತ್ಯ ಶಾಲೆಯ ರಜತ ಮಹೋತ್ಸವ ಹಾಗೂ ಸಂಗೀತ ವಿದ್ವಾನ್ ಎಂ. ನಾರಾಯಣ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಜೂ.9ರಂದು ಮೂಲ್ಕಿಯ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಯುವಜನ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ವಹಿಸಲಿದ್ದಾರೆ. ರಜತ ಮಹೋತ್ಸವ ಕಾರ್ಯಕ್ರಮವನ್ನು ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಟ್ ವೆಂಕಟೇಶ್ ರಾವ್ ಪುನರೂರು ಉದ್ಘಾಟಿಸಲಿದ್ದಾರೆ. ಹಿರಿಯ ಸಂಗೀತ ವಿದ್ವಾಂಸ ಗೋಪಾಲಕೃಷ್ಣ ಅಯ್ಯರ್ ಮಂಗಳೂರು ಅಭಿನಂದಿಸಲಿದ್ದಾರೆ. ಮೂಲ್ಕಿಯ ಬಿಲ್ಲವ ಸಂಘದ ಅಧ್ಯಕ್ಷ ಯಧೀಶ್ ಅಮೀನ್ ಕೊಕ್ಕರ್ಕಲ್, ಮೂಲ್ಕಿಯ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆ ಸಂಚಾಲಕ ಎಚ್.ವಿ. ಕೋಟ್ಯಾನ್ ಪಾಲ್ಗೊಳ್ಳಲಿದ್ದಾರೆ.