ಉಡುಪಿ: 9ರಂದು ಸಿಇಟಿ-ಕೆಇಎ ಪೂರ್ವಭಾವಿ ಸಮಾಲೋಚನೆ
ಉಡುಪಿ: ಇಲ್ಲಿನ ಕೃಷ್ಣಮಠ, ಸೋದೆ ವಾದಿರಾಜ ಮಠ ಟ್ರಸ್ಟ್ ಮತ್ತು ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಯ ಆಶ್ರಯದಲ್ಲಿ 2013ನೇ ಸಾಲಿನ ಸಿಇಟಿ- ಕೆಇಎ ಪ್ರವೇಶ ಪ್ರಕ್ರಿಯೆಗಳ ಪೂರ್ವಭಾವಿ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಜೂ. 9ರಂದು ಬೆಳಗ್ಗೆ 9.30ಕ್ಕೆ ಇಲ್ಲಿನ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಶ್ರೀಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಮತ್ತು ಮ್ಯಾನೇಜ್ಮೆಂಟ್ನ ಪ್ರಾಂಶುಪಾಲ ಪ್ರೊ.ಡಾ. ರಾಧಕೃಷ್ಣ ಎಸ್. ಐತಾಳ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ಉಪಯಕ್ತವಾದ ಈ ಕಾರ್ಯಕ್ರಮವನ್ನು ಪರ್ಯಾಯ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಲಿರುವರು. ನಂತರ ಮಂಗಳೂರು ಸಿಇಟಿ ಸಮಾಲೋಚನಾ ಕೇಂದ್ರದ ಪೂರ್ವ ಸಮಾಲೋಚನಾಧಿಕಾರಿ ಶ್ರುತಕೀರ್ತಿರಾಜ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಇಟಿ ಸಮಾಲೋಚನಾ ಪ್ರಕ್ರಿಯೆಯ ಮತ್ತು ನಿಯಮಾವಳಿಗಳ ಕುರಿತು ಸಮಗ್ರ ಮಾಹಿತಿ ಮತ್ತು ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ವೃತ್ತಿ ಶಿಕ್ಷಣ ಕ್ಷೇತ್ರದ ವಿವಿಧ ಪ್ರಕಾರಗಳ ಪ್ರಾಧ್ಯಾಪಕರು ಭಾಗವಹಿಸಿ ವೃತ್ತಿ ಶಿಕ್ಷಣ ಕ್ಷೇತ್ರಗಳ ಬಗ್ಗೆ ಮಾಹಿತಿ ಒದಗಿಸಲಿರುವರು.
ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶವನ್ನು ಅಪೇಕ್ಷಿಸುವ ವಿದ್ಯಾರ್ಥಿಗಳ ಪ್ರವೇಶ ಸುತ್ತಿನ ಆಯ್ಕೆಗಳನ್ನು ಆಯ್ದುಕೊಳ್ಳಲು ಉಯುಕ್ತವಾಗುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿರುವ ದಿನಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆ ಸೌಲಭ್ಯಗಳನ್ನು ಬಂಟಕಲ್ಲಿನಲ್ಲಿರುವ ಮಧ್ವವಾದಿರಾಜ ಸಂಸ್ಥೆಯಲ್ಲಿ ಮತ್ತು ಉಡುಪಿಯ ಶ್ರೀ ಸೋದೆ ವಾದಿರಾಜ ಟ್ರಸ್ಟಿನ ಕಚೇರಿಯಲ್ಲಿ 9 ರಿಂದ 5 ಗಂಟೆ ವರೆಗೆ ಉಚಿತವಾಗಿ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಸೋದೆ ವಾದಿರಾಜ ಮಠ ಟ್ರಸ್ಟಿನ ಸದಸ್ಯ ರಾಘವೇಂದ್ರ ತಂತ್ರಿ ಇದ್ದರು.