ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರಾಜ್ಯ ಹೆದ್ದಾರಿಯುದ್ದಕ್ಕೂ ಒಳ ಚರಂಡಿಯೇ ಇಲ್ಲ

Mainashree
Updated On : 6 Jun 2013, 10:24 am

ಉಡುಪಿ: ಮಳೆಗಾಲ ಶುರುವಾಯಿತೆಂದರೆ ಉಡುಪಿ ನಗರದ ರಸ್ತೆಗಳ ಪರಿಸ್ಥಿತಿ ಅಧ್ವಾನವಾಗಿ ಬಿಡುತ್ತವೆ. ರಸ್ತೆಯಲ್ಲಿ ಓಡಾಡುವುದಕ್ಕೇ ಗಾಬರಿಯಾಗುತ್ತದೆ.
60 ಚದರ ಕಿ.ಮೀಯ ವ್ಯಾಪ್ತಿಯ ಉಡುಪಿ ನಗರದ ಬಹುಭಾಗದಲ್ಲಿ ಒಳಚರಂಡಿಯೇ ಇಲ್ಲ. ಅಂತಾರಾಷ್ಟ್ರೀಯ ನಗರ ಎಂದು ಕರೆಸಿಕೊಳ್ಳುವ ಮಣಿಪಾಲ ನಗರದಲ್ಲಿಯೂ ಒಳಚರಂಡಿ ಇಲ್ಲ. ಮಳೆ ಬಂತೆಂದರೆ ಚರಂಡಿಯಲ್ಲಿ ಹರಿಯಬೇಕಾದ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತವೆ.
ಕಾಟಾಚಾರದ ಕೆಲಸ: ನಗರಸಭೆ ಚರಂಡಿಯೇನೋ ನಿರ್ಮಿಸಿದೆ. ಆದರೆ ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಈ ಸಮಸ್ಯೆ ಪ್ರತಿ ವರ್ಷ ಮಳೆಗಾಲದಲ್ಲು ಕಂಡು ಬರುತ್ತದೆ. ವಾರದ ಹಿಂದೆ ಮಣಿಪಾಲದಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡುವ ಕೆಲಸ ನಗರಸಭೆಯಿಂದ ನಡೆಯಿತು. ಪೌರಕಾರ್ಮಿರರು ಚರಂಡಿಯಲ್ಲಿದ್ದ ಹೂಳು ಎತ್ತಿ ಫುಟ್ಪಾತ್ ಮೇಲೆ ಹಾಕಿ ಹಾಗೇ ಬಿಟ್ಟರು. ಮರು ದಿನವೇ ಮಳೆ ಬಂದಿದ್ದರಿಂದ ಫುಟ್ಪಾತ್ ಮೇಲಿದ್ದ ಹೂಳೆಲ್ಲ ಮತ್ತೆ ಚರಂಡಿ ಸೇರಿತು. ಮತ್ತೆ ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆ ಮೇಲೆ ಹರಿಯಿತು. ಪ್ರತಿ ದಿನ ಸಾವಿರಕ್ಕೂ ಹೆಚ್ಚು ವಾಹನಗಳು ಓಡಾಡುವ ಈ ರಸ್ತೆಯ ಅಕ್ಕಪಕ್ಕದಲ್ಲಿ ನಡೆದಾಡುವುದೆಂದರೆ ಸರ್ಕಸ್ ಗೊತ್ತಿರಲೇಬೇಕು. ಇಲ್ಲದಿದ್ದರೆ ವಾಹನಗಳಿಂದ ಹಾರುವ ಕೆಸರು ನೀರಿನ ಸ್ನಾನ ಅನಿವಾರ್ಯವಾಗುತ್ತದೆ.
ಹೆದ್ದಾರಿ ಚೆನ್ನಾಗಿದೆ, ಚರಂಡಿಯೇ ಇಲ್ಲ: ಕೋಟಿ ರುಪಾಯಿ ವೆಚ್ಚ ಮಾಡಿ ಅಗಲೀಕರಿಸಿರುವ ಉಡುಪಿ- ಮಣಿಪಾಲ ರಾಜ್ಯ ಹೆದ್ದಾರಿಯ ಅಕ್ಕಪಕ್ಕದ ಫುಟ್ಪಾತ್ಗಳ ಕೆಳಗೆ ನೀರು ಹರಿಯುವುದಕ್ಕೆ ಒಳಚರಂಡಿ ನಿರ್ಮಾಣ ಮಾಡಬೇಕೆಂದು ಎಂದು ಆಗಿನ ಉಸ್ತುವಾರಿ ಸಚಿವ ದಿ.ಡಾ.ವಿ.ಎಸ್. ಆಚಾರ್ಯ ಹೇಳುತ್ತಿದ್ದರು. ಆದರೆ ರಸ್ತೆ ಅಗಲಗೊಂಡು ನಾಲ್ಕೈದು ವರ್ಷಗಳೇ ಕಳೆದರೂ ಫುಟ್ಪಾತ್ ಮಾತ್ರ ಇನ್ನೂ ನಿರ್ಮಾಣ ಆಗಿಲ್ಲ. ಇನ್ನು ಒಳಚರಂಡಿಯನ್ನು ಕೇಳುವುದೇ ಬೇಡ.
ಮಿನಿ ಜಲಾಶಯ ನಿರ್ಮಾಣ: ಉಡುಪಿ- ಮಣಿಪಾಲ ರಾಜ್ಯ ಹೆದ್ದಾರಿ ಅಡಿಗಳಷ್ಟು ಎತ್ತರವಾಗಿದ್ದು, ಅದನ್ನು ಸೇರುವ ಅಕ್ಕಪಕ್ಕದ ರಸ್ತೆಗಳು ತಗ್ಗಾಗಿರುವುದರಿಂದ ಪ್ರತಿ ಬಾರಿ ಮಳೆಗಾಲದಲ್ಲಿ ಈ ರಸ್ತೆಗಳು ಸೇರುವಲ್ಲಿ ಸಣ್ಣ ಮಳೆಗೂ ಮಿನಿಜಲಾಶಯ ನಿರ್ಮಾಣವಾಗುತ್ತದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆ ಇದ್ದರೂ ನಗರಸಭೆ ಅಧಿಕಾರಿಗಳು, ಸದಸ್ಯರು ಮಳೆಗಾಲ ಮುಗಿಯುತ್ತಿದ್ದಂತೆ ಈ ಸಮಸ್ಯೆಯೂ ಮುಗೀತು ಎಂದು ಸುಮ್ಮನಿರುತ್ತಾರೆ.
ಕೃಷ್ಣಮಠದ ರಥಬೀದಿ, ರಥಬೀದಿಯನ್ನು ಸೇರುವ 4 ಪ್ರಮುಖ ರಸ್ತೆಗಳು, ರಾಜಾಂಗಣ, ಕೃಷ್ಣಮಠದ ವಾಹನ ಪಾರ್ಕಿಂಗ್ ಸ್ಥಳ, ಸರ್ವಿಸ್ ಬಸ್ ನಿಲ್ದಾಣ ಬಳಿಯ ಕ್ಲಾಕ್ ಟವರ್, ಬೃಂದಾವನ ಹೋಟೆಲ್ ಸಮೀಪ, ಟಿವಿಎಸ್ ಶೋರೂಮ್ ರಸ್ತೆ, ಹಳೆ ಪೊಲೀಸ್ ಠಾಣೆ ರಸ್ತೆ, ಪೂರ್ಣಪ್ರಜ್ಞಾ ಕಾಲೇಜು ರಸ್ತೆ, ಕೋರ್ಟ್ ಬ್ಯಾಕ್ ರಸ್ತೆ... ಹೀಗೆ ನಗರದ ಬಹುತೇಕ ರಸ್ತೆಗಳಲ್ಲಿ ಸಾಗಲು ಮಳೆಗಾಲದಲ್ಲಿ ಹೆದರಿಕೆ ಹುಟ್ಟಿಸುತ್ತವೆ.
ನಗರಸಭೆಯಲ್ಲಿ ಆಡಳಿತ ಬದಲಾಗಿದೆ. ಈ ಬಾರಿಯಾದರೂ ನಗರದಲ್ಲೊಂದು ಸುವ್ಯವಸ್ಥಿತ ಒಳಚರಂಡಿ ಅಥವಾ ರಸ್ತೆಗಳ ಪಕ್ಕದಲ್ಲಿ ನೀರು ಹರಿಯುವ ಚರಂಡಿಯನ್ನಾದರೂ ನಿರ್ಮಿಸುವ ಯೋಜನೆ ಹಾಕಿಕೊಂಡು ಕಾರ್ಯರೂಪಕ್ಕೆ ತಂದರೆ ಆಡಳಿತಾಧಿಕಾರ ಕೊಟ್ಟಿರುವ ನಗರದ ಜನತೆಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ.

ಸುಭಾಶ್ಚಂದ್ರ ವಾಗ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement