ಸುದ್ದಿ ಸಂಕ್ಷೇಪ
ಯಾಕೂಬ್ ಖಾದರ್ ಗುಲ್ವಾಡಿ ಮಾಲ್ಡೀವ್ಸ್ಗೆ
ಕುಂದಾಪುರ: ಮಾಲ್ಡೀವ್ಸ್ನಲ್ಲಿ ಜೂನ್ 7ರಂದು ನಡೆಯಲಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಮಾಲ್ಡೀವ್ಸ್ ಕನ್ನಡ ಸಂಘದ ಎರಡನೆಯ ವಾರ್ಷಿಕೋತ್ಸವ ಸಮಾರಂಭದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಹಿತಿ, ಕಲಾವಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ದುಬೈ, ಶ್ರೀಲಂಕಾ ಸಿಂಗಾಪುರ, ಓಮನ್, ಕತಾರ್, ಮಾಲ್ಡೀವ್ಸ್, ಅಂಡಮಾನ್ ನಿಕೋಬಾರ್ ಮೊದಲಾದ ದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಇವರು ಯುವ ಪ್ರತಿಭಾವಂತ ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿ, ಪ್ರಾಚ್ಯವಸ್ತು ಸಂಗ್ರಾಹಕಾರರಾಗಿ, ಕೋಮು ಸೌಹಾರ್ದತೆಗಾಗಿ ದುಡಿಯುತ್ತಿದ್ದಾರೆ.
ಮಾಲ್ಡೀವ್ಸ್ ಕನ್ನಡ ಬಳಗ ಮತ್ತು ಹೃದಯವಾಹಿನಿ ಪತ್ರಿಕೆ ಸಂಯುಕ್ತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಕರ್ನಾಟಕದ ಕಲೆ, ಸಾಹಿತ್ಯ ಹಾಗು ಸಂಸ್ಕೃತಿಯನ್ನು ಅನಿವಾಸಿ ಕನ್ನಡಿಗರ ಹೊಸ ತಲೆಮಾರಿನ ಯುವಜನರಲ್ಲಿ ಉಳಿಸಿ ಬೆಳೆಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭವನ್ನು 2008ರಿಂದ ವಿವಿಧ ದೇಶಗಳಲ್ಲಿ ನಡೆಸಿಕೊಂಡು ಬರುತ್ತಿದೆ. ಜೂನ್ 7ರಂದು ಮಾಲ್ಡೀವ್ಸ್ನ ಬ್ಯಾಂಡೋಸ್ ಐಲ್ಯಾಂಡ್ನಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗೌರವ ಪ್ರಶಸ್ತಿ ಪ್ರದಾನಗಳು ನಡೆಯಲಿವೆ.