ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಶಂಕಿತ ಡೆಂಘೀಗೆ ಮತ್ತೊಂದು ಬಲಿ

Mainashree
Updated On : 7 Jun 2013, 10:18 am

ಸುಬ್ರಹ್ಮಣ್ಯ: ಮಹಾಮಾರಿ ಡೆಂಘೀ ಗುತ್ತಿಗಾರಿನಲ್ಲಿ 2ನೇ ಬಲಿ ಪಡೆದಿದೆ. 2 ತಿಂಗಳ ಹಿಂದೆ ನಾಲ್ಕೂರು ಗ್ರಾಮದ ಹೊಸಹಳ್ಳಿಯ ಹುದೇರಿ ಮಹಿಳೆ ನಿರ್ಮಲ ಮೃತಪಟ್ಟಿದ್ದು, ಇದೀಗ ಕಾಡುಕೊಲ್ಯದ ಜಯರಾಮ (59) 2ನೇ ಬಲಿಯಾಗಿದ್ದಾರೆ.
 ಗುತ್ತಿಗಾರು ಪರಿಸರದ ಕಾಡುಕೊಲ್ಯದ ಜಯರಾಮ ಅವರು ಜ್ವರಕ್ಕೆಂದು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧ ಪಡೆಯುತ್ತಿದ್ದರು. ಅಲ್ಲಿನ ವೈದ್ಯಾಧಿಕಾರಿ ಡಾ. ನಂದ ಕುಮಾರ್ ಅವರನ್ನು ಪರೀಕ್ಷಿಸಿ, ಸಂಶಯಾಸ್ಪದ ಡೆಂಘೀ ಜ್ವರವೆಂದು ಔಷಧ ನೀಡಿದ್ದರು. ಬಳಿಕ ಅವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಅಲ್ಲಿ ಮೆದುಳು ಜ್ವರವೆಂದು ದಾಖಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ.
ಇನ್ನೋರ್ವ ಗಂಭೀರ: ತೀವ್ರ ಜ್ವರದಿಂದ (ಡೆಂಘೀ ಜ್ವರದ ಲಕ್ಷಣ ಕಂಡುಬಂದಿದ್ದು) ಬಳಲುತ್ತಿರುವ ಗುತ್ತಿಗಾರಿನ ನವವಿವಾಹಿತ ಛತ್ರಪಾಡಿಯ ಹರೀಶ್ (28) ಪರಿಸ್ಥಿತಿಯು ಚಿಂತಾಜನವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
 ಗುತ್ತಿಗಾರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಂಗೆಡಿಸುತ್ತಿರುವ ಮಹಾಮಾರಿ ಡೆಂಘೀ ಬಲಿ ಪಡೆದುಕೊಂಡರೂ ಸ್ಥಳೀಯ ಆಡಳಿತ ಮತ್ತು ಜಿಲ್ಲಾ ಆಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಜ್ವರಬಾಧಿತ ಗ್ರಾಮಗಳಿಗೆ ಆರೋಗ್ಯ ಕಾರ್ಯಕರ್ತರು ಉಚಿತ ಔಷಧ ನೀಡುವ ವ್ಯವಸ್ಥೆ ಜಾರಿಗೆ ಬಂದಿಲ್ಲ.
 ಈ ಭಾಗದ ಜನರಿಗೆ ಡೆಂಘೀ ಕುರಿತು ಆರೋಗ್ಯ ಜಾಗೃತಿ ಆಭಿಯಾನ ಜಾರಿಗೆ ಬಂದಿಲ್ಲ. 30ಕ್ಕಿಂತಲೂ ಅಧಿಕ ಮಂದಿಗೆ ಡೆಂಘೀ ತಗಲಿ, ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ. ಇನ್ನಷ್ಟು ಮಂದಿ ಮಂಗಳೂರು, ಸುಳ್ಯ, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸಚಿವರ ತವರಿನಲ್ಲಿ ಈ ರೀತಿ ಬಲಿಪಡೆಯುತ್ತಿರುವುದು ಈ ಭಾಗದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement