ಹೆಚ್ಚು ಸುಂಕ ವಸೂಲಿ: ಮೀನಿನ ಬುಟ್ಟಿ ಎಸೆದು ಗಲಾಟೆ
ಮೂಲ್ಕಿ: ಕಾರ್ನಾಡಿನ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುವ ಮಹಿಳೆಯರಿಂದ ಗುತ್ತಿಗೆದಾರ ಹೆಚ್ಚಿನ ಸುಂಕ ವಸೂಲಿಗೆ ಯತ್ನಿಸಿ, ಮೀನಿನ ಬುಟ್ಟಿಯನ್ನು ಎಸೆದು ಗಲಾಟೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಬಳಿಕ ಪೊಲೀಸರ ಆಗಮನದ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ. ಮೂಲ್ಕಿ ನಗರ ಪಂಚಾಯಿತಿಗೆ ಸಂಬಂಧಪಟ್ಟ ಮೂಲ್ಕಿಯ ಕಾರ್ನಾಡಿನ ಮೀನು ಮಾರುಕಟ್ಟೆಯಲ್ಲಿ ಕಳೆದ ವರ್ಷ 90,000ಕ್ಕೆ ಟೆಂಡರ್ ಆಗಿದ್ದು, ಈ ಬಾರಿ ರು. 1,45,000ಕ್ಕೆ ಹೆಜಮಾಡಿಯ ವ್ಯಕ್ತಿಯೊಬ್ಬರೂ ಗುತ್ತಿಗೆ ಪಡೆದಿದ್ದರು. ಪ್ರತಿ ಮಹಿಳೆಯರಿಂದ ಬುಟ್ಟಿಗೆ 5 ರ ಬದಲು 10 ಹೆಚ್ಚುವರಿ ಹಣ ವಸೂಲು ಮಾಡಲಾಗುತ್ತಿತ್ತು. ಕೆಲವು ಮಹಿಳೆಯರು ಹೆಚ್ಚು ಬುಟ್ಟಿ ಇಟ್ಟರೆ ಅದಕ್ಕೆ ತಲಾ 10ರಂತೆ ಪಡೆಯಲು ಯತ್ನಿಸುತ್ತಿದ್ದು, ಬುಧವಾರ ಸಂಜೆ ಮಹಿಳೆಯೊಬ್ಬರಿಂದ ಹೆಚ್ಚಿಟ್ಟಿದ್ದ ಬುಟ್ಟಿಗೆ ಹಣ ಕೇಳಿದಾಗ ವಾಗ್ವಾದ ನಡೆದು ಗುತ್ತಿಗೆದಾರ ಮಹಿಳೆಯ ಬುಟ್ಟಿಯನ್ನು ಎಸೆದು ಚೆಲ್ಲಾಪಿಲ್ಲಿ ಮಾಡಿದ್ದ. ಬಳಿಕ ಸ್ಥಳಕ್ಕಾಗಮಿಸಿದ ಮೂಲ್ಕಿ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ನಿಯಂತ್ರಿಸಿದರು. ವಿಷಯ ತಿಳಿದ ಮೂಲ್ಕಿ ನಗರ ಪಂಚಾಯಿತಿ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಸ್ಥಳಕ್ಕೆ ಆಗಮಿಸಿ, ಬುಟ್ಟಿಗೆ ರು. 5 ರಿಂದ ಹೆಚ್ಚು ತೆಗೆದುಕೊಳ್ಳದಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಈ ಬಗ್ಗೆ ನಗರ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದ್ದು, ಹೆಚ್ಚು ಹಣ ತೆಗೆದುಕೊಳ್ಳದಂತೆ ನಿರ್ಣಯಿಸಲಾಗಿದೆ.