ಕಾರ್ಕಳ: ಪ್ರಥಮ ಚಿಕಿತ್ಸಾ ಮಾಹಿತಿ ಕಾರ್ಯಾಗಾರ
ಕಾರ್ಕಳ: ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ಉಪವಿಭಾಗದ ವತಿಯಿಂದ ಎರಡು ದಿನಗಳ ಪ್ರಥಮ ಚಿಕಿತ್ಸಾ ಮಾಹಿತಿ ಕಾರ್ಯಗಾರ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಗುರುವಾರ ಆರಂಭಗೊಂಡಿತು. ಕಾಪು ಮತ್ತು ಕಾರ್ಕಳ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಮಣಿಪಾಲ ವಿಶ್ವವಿದ್ಯಾಲಯದ ಪಬ್ಲಿಕ್ ಹೆಲ್ತ್ ವಿಭಾಗ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮಾಹಿತಿ ನೀಡಿದರು.
ಅವಘಡಗಳು ಸಂಭವಿಸಿದ ಸ್ಥಳಕ್ಕೆ ತೆರಳುವ ಪೊಲೀಸ್ ಸಿಬ್ಬಂದಿ ಪ್ರಥಮವಾಗಿ ಇದ್ದ ವ್ಯವಸ್ಥೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡುವ ವಿಧಾನಗಳನ್ನು ತಿಳಿದುಕೊಳ್ಳಬೇಕು. ವಿಷ ಸೇವನೆ, ವಿದ್ಯುತ್ ಶಾಕ್, ಅಪಘಾತ, ನೀರಿನಲ್ಲಿ ಮುಳುಗಿದ ಸಂದರ್ಭ ಹಾಗೂ ಪ್ರಜ್ಞೆ ತಪ್ಪಿದ ಸಮಯದಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನಗಳು ಹೇಗೆ ಎಂಬುವುದರ ಕುರಿತು ಕಾರ್ಯಗಾರದಲ್ಲಿ ವಿವರಿಸಿದರು. ಮಣಿಪಾಲ ವಿಶ್ವವಿದ್ಯಾಲಯದ ಪಬ್ಲಿಕ್ ಹೆಲ್ತ್ ವಿಭಾಗದ ಡಾ. ಪ್ರೇಮಾನಂದ ಮತ್ತು ಸಂದೀಪ್ ಜತೆಗಿದ್ದರು. ಐಜಿಪಿ ಕಳೆದ ಕೆಲ ದಿನಗಳ ಹಿಂದೆ ಸುತ್ತೋಲೆ ಹೊರಡಿಸಿ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳುವಂತೆ ಅದೇಶಿಸಿದ್ದರು. ಆ ಹಿನ್ನೆಲೆಯಲ್ಲಿ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ನಗರ ಠಾಣಾಧಿಕಾರಿ ಪಿ.ಪ್ರಮೋದ್ ಕುಮಾರ್ ತಿಳಿಸಿದ್ದಾರೆ.