ಮಳೆಗಾಲಕ್ಕೂ ಮುನ್ನ ಕೊರಗ ಕುಟುಂಬಕ್ಕೆ ಸಿಕ್ಕಿತು ಶಾಶ್ವತ ಸೂರು
ಉಡುಪಿ: ಶಿರ್ವದ ಕಡಂಬು ಎಂಬಲ್ಲಿನ ನಿವಾಸಿ ಪೊರಲ ದೊಂಬ ಕೊರಗ ಮತ್ತು ಕುಟುಂಬ ಈ ಮಳೆಗಾಲದಲ್ಲಿ ಎಲ್ಲಿ ಬದುಕುವುದು ಎಂಬ ಆತಂಕದಲ್ಲಿದ್ದಾಗ, ಸ್ಥಳೀಯ ಗ್ರಾಮಸ್ಥರು ಅವರ ಸಹಾಯಕ್ಕೆ ಧಾವಿಸಿ ಅವರಿಗೊಂದು ಗಟ್ಟಿ ನೆಲೆ ಒದಗಿಸಿದ್ದಾರೆ. ಈ ಮಳೆಗಾಲ ಮಾತ್ರವಲ್ಲ ಮುಂದೆಯೂ ನಿರಾತಂಕವಾಗಿ ಬದುವುದಕ್ಕೊಂದು ಸೂರು ನಿರ್ಮಿಸಿ ಕೊಟ್ಟಿದ್ದಾರೆ...
ಕೊರಗ ಜನಾಂಗಕ್ಕೆ ಸೇರಿರುವ ಪೊರಲ ದೊಂಬ ಕೊರಗ ತಮ್ಮ ಮಕ್ಕಳಾದ ಗೋಪಾ, ರಾಜು, ತುಕ್ರ, ವಿಠಲ ಹಾಗೂ ಗುಬ್ಬಿ ಅವರೊಂದಿಗೆ ಸಣ್ಣ ಗುಡಿಸಲಲ್ಲಿ ವಾಸಿಸುತ್ತಿದ್ದರು. 1995ಲ್ಲಿ ಯಾರು ಯಾರದ್ದೋ ಕೈಕಾಲು ಹಿಡಿದು ಸರ್ಕಾರದ ಅನುದಾನದಲ್ಲಿ ಈ ಮನೆ ಎಂಬ ಗುಡಿಸಲನ್ನು ದುರಸ್ತಿ ಮಾಡಿಸಿದ್ದರು. ಆದರೆ ಪ್ರತಿ ಮಳೆಗಾಲದಲ್ಲಿ ಈ ಗುಡಿಸಲು ಶಿಥಿಲಗೊಂಡು ಕುಸಿಯುವ ಹಂತಕ್ಕೆ ಬಂದಿರುತ್ತದೆ. ಈ ಹಿಂದೆ ಎರಡು ಬಾರಿ ಶಿರ್ವ ಗ್ರಾ.ಪಂ. ಇವರಿಗೆ ಸಹಾಯ ಮಾಡಿತ್ತು. ಇದೀಗ ಮತ್ತೆ ಈ ಗುಡಿಸಲು ಮಳೆ- ಗಾಳಿಗೆ ಕುಸಿಯುವ ಹಂತಕ್ಕೆ ತಲುಪಿತ್ತು.
ಪ್ರತಿ ಮಳೆಗಾಲದಲ್ಲೂ ಪಾಡು ತಪ್ಪಿದ್ದಲ್ಲ: ಮಳೆಗಾಲ ಆರಂಭಕ್ಕೂ ಮುನ್ನ ಗುಡಿಸಲು ದುರಸ್ತಿಗೊಳಿಸುವುದಕ್ಕಾಗಿ ನೆರವು ಕೋರಿ ಪೊರಲ ದೊಂಬ ಫೆಬ್ರವರಿ ಹಾಗೂ ಮೇ ತಿಂಗಳಲ್ಲಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಚುನಾವಣೆ ಕಾರಣ ಹೇಳಿ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಅರ್ಜಿಯನ್ನೇ ಮರೆತಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆಯ ಮಾಡು ಸೋರುತ್ತಿರುವುದರಿಂದ ಮನೆಯೊಳಗೆ ಇರುವುದು, ಹೊರಗೆ ಇರುವುದು ಎರಡೂ ಒಂದೇ ಎಂಬಂತಾಗಿತ್ತು. ದುರಸ್ತಿ ಮಾಡೋಣ ಎಂದರೆ ಕೈಯಲ್ಲಿ ಅಷ್ಟು ಆರ್ಥಿಕ ಬಲ ಇಲ್ಲ. ಹಾಗೆಂದು ಸುಮ್ಮನೆ ಕೈಕಟ್ಟಿ ಕುಳಿತರೆ ಈ ಮಳೆಗಾಲದಲ್ಲಿ ಜೀವನ ಸಾಗಿಸೋದು ಹೇಗೆಂಬ ಯೋಚನೆ ಈ ಕುಟುಂಬಕ್ಕಿತ್ತು.
ಕೊನೆಗೆ ಬೇರೆ ದಾರಿ ಇಲ್ಲದೆ ಮನೆಯ ಪಕ್ಕದಲ್ಲಿ ತೆಂಗಿನ ಗರಿ- ಬಿದಿರಿನ ಜೋಪಡಿ ಕಟ್ಟಿ ದಿನ ಕಳೆಯಲಾರಂಭಿಸಿದರು. ಸ್ನಾನಗೃಹವೂ ಇಲ್ಲದಿರುವುದರಿಂದ ಕಂಬ ನೆಟ್ಟು ಅದಕ್ಕೆ ಬಟ್ಟೆ ಕಟ್ಟಿ ತಾತ್ಕಾಲಿಕ ಸ್ನಾನಹೃಹ ನಿರ್ಮಿಸಿಕೊಂಡಿದ್ದಾರೆ. ಇದನ್ನು ತಿಳಿದ ಸ್ಥಳೀಯರು ತಾ.ಪಂ.ನ ಮಾಜಿ ಸದಸ್ಯ ಇಗ್ನೇಶಿಯಸ್ ಡಿಸೋಜ ನೇತೃತ್ವದಲ್ಲಿ ಸಹಾಯಕ್ಕೆ ಮುಂದೆ ಬಂದರು.
ಶಾಶ್ವತ ಸೂರು: ಮನೆಯ ದುರಸ್ತಿ ಮಾತ್ರವಲ್ಲ, ಗುಡಿಸಲಿಗೆ ಮನೆಯ ಬಲ ನೀಡುವುದಕ್ಕೆ ಬೇಕಾದ ಮರ, ಪಕ್ಕಾಸು, ಹಂಚು, ದಂಬೆ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿ ತಂದರು. ಸ್ಥಳೀಯರೇ ಆದ ವಾಮನ ಆಚಾರ್ಯ, ಸೀತರಾಮ ಆಚಾರ್ಯ ಮತ್ತಿತರರು ಇದೀಗ ಮಳೆಯ ನಡುವೆಯೂ ಮನೆಗೊಂದು ಹೆಂಚಿನ ಮಾಡು ನಿರ್ಮಾಣ ಮಾಡುತ್ತಿದ್ದಾರೆ.
ಶೌಚಾಲಯ, ವಿದ್ಯುತ್ ಸೌಲಭ್ಯ ಲಭಿಸೀತೇ?
ಸ್ಥಳೀಯರ ಈ ಸಹಾಯಕ್ಕೆ ಹೇಗೆ ಕೃತಜ್ಞತೆ ಹೇಳಬೇಕು ಎಂದು ತಿಳಿಯದ ಪೊರಲ ಮತ್ತು ಅವರ ಮಕ್ಕಳು ಕೈಮುಗಿಯುತ್ತಾರೆ. ಜತೆಗೆ 2005ರಲ್ಲಿ ತಮಗೊಂದು ಶೌಚಾಲಯ ಬೇಕು, ಮನೆಗೆ ವಿದ್ಯುತ್ ಸಂಪರ್ಕ ಬೇಕು ಎಂದು ಅರ್ಜಿ ಸಲ್ಲಿಸಿದ್ದೇನೆ. ಇನ್ನಾದರೂ ಅದು ಮಂಜೂರಾಗಬಹುದೇ ಎಂದು ಕೇಳುತ್ತಾರೆ. ಜಿಲ್ಲಾಡಳಿತ ತಕ್ಷಣ ಇತ್ತ ಗಮನಹರಿಸಬೇಕಾಗಿದೆ.