ಹೆಬ್ರಿ: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
ಉಡುಪಿ: ಜಿಲ್ಲಾದ್ಯಂತ ಕೆಲವು ದಿನಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಗುರುವಾರ ಸಂಜೆ ಕಾರ್ಮಿಕನೊಬ್ಬ ವಿದ್ಯುತ್ ತಂತಿ ತಗಲಿ ಮೃತಪಟ್ಟ ಘಟನೆ ನಾಡ್ಪಾಲು ಗ್ರಾಮದಲ್ಲಿ ನಡೆದಿದೆ. ಶುಕ್ರವಾರವೂ ಮಳೆ ಮುಂದುವರಿದಿದ್ದು, ಕರಾವಳಿಗೆ ಮುಂಗಾರು ಮಳೆ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟಿದೆ.
ಕಾರ್ಕಳ ತಾಲೂಕಿನ ಹೆಬ್ರಿ ಸಮೀಪದ ನಾಡ್ಪಾಲು ಗ್ರಾಮದ ವಣಜಾರು ಎಂಬಲ್ಲಿ ರಾಮ ನಾಯ್ಕ್ (50) ಎಂಬ ಕಾರ್ಮಿಕ ವಿದ್ಯುತ್ ಅಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಅವರು ಇಲ್ಲಿ ಹೊಸದಾಗಿ ನಿರ್ಮಿಸುತ್ತಿದ್ದ ಸೇತುವೆಯ ಕೆಲಸದಲ್ಲಿ ತೊಡಗಿಕೊಂಡಿದ್ದರು. ಗುರುವಾರ ಮಧ್ಯಾಹ್ನ 3.30ರ ವೇಳೆಗೆ ಮಳೆ ಜಾಸ್ತಿಯಾದ್ದರಿಂದ ಕೆಲಸ ನಿಲ್ಲಿಸಿದರು. ನಂತರ ಹಿಟಾಚಿ ವಾಹನವನ್ನು ಇನ್ನೊಂದು ವಾಹನಕ್ಕೆ ಸಾಗಿಸುವಾಗ ಕೆಳಗೆ ಜೋತಾಡುತ್ತಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರೊಂದಿಗಿದ್ದ ವಿ.ಕೆ. ರಾಜನ್ ಮತ್ತು ಪುರೋಷೋತ್ತಮ ಎಂಬವರಿಗೆ ಗಾಯಗಳಾಗಿವೆ.
ಉಡುಪಿಯಲ್ಲಿ ಶುಕ್ರವಾರ ಸರಾಸರಿ 99.80 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 122.60 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 84.60 ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 92.20 ಮಿ.ಮೀ. ಮಳೆಯಾಗಿದೆ.