ಉಡುಪಿ: ಸಂಗೀತ ಕಲಾವಿದೆ ರಂಜನಿ ಹೆಬ್ಬಾರ್ ನಿಧನ
ಉಡುಪಿ: ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಹೆಸರು ಮಾಡಿದ್ದ ಉಡುಪಿಯ ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದೆ ರಂಜನಿ ಹೆಬ್ಬಾರ್ (30) ಭಾನುವಾರ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಇಲ್ಲಿನ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಅರವಿಂದ ಹೆಬ್ಬಾರ್- ವಸಂತಲಕ್ಷ್ಮೀ ಅವರ ಪುತ್ರಿ ರಂಜನಿ, ಚೆನ್ನೈನಲ್ಲಿ ವಾಸವಿದ್ದು ಸಂಗೀತ ಸಾಧನೆ ಮಾಡುತ್ತಿದ್ದರು. ಖ್ಯಾತ ಸಂಗೀತಗುರು ವಿದ್ವಾನ್ ಚೆಂಗಲ್ಪೇಟ್ ರಂಗನಾಥನ್ ಅವರ ಶಿಷ್ಯೆಯಾಗಿದ್ದ ಈಕೆ ಕರ್ನಾಟಕಕ್ಕಿಂತಲೂ ಚೆನ್ನೈನಲ್ಲಿ ಮನೆಮಾತಾಗಿದ್ದರು.
ಎ ಗ್ರೇಡ್ ಕಲಾವಿದೆ: ಮದ್ರಾಸ್ ವಿವಿಯಲ್ಲಿ ಸಂಗೀತದಲ್ಲಿ ಎಂಎ ವ್ಯಾಸಂಗ ಮಾಡಿ, ಭಾಷೆಯ ಮಿತಿಯನ್ನೂ ಮೀರಿ ತಮಿಳನ್ನು ಕಲಿತು, ದಕ್ಷಿಣ ಭಾರತದಲ್ಲಿ ಶ್ರೇಷ್ಠ ಶಾಸ್ತ್ರೀಯ ಗಾಯಕರಲ್ಲಿ ಗುರುತಿಸಲ್ಪಟ್ಟಿದ್ದರು. ಆಲ್ ಇಂಡಿಯಾ ರೇಡಿಯೊದ ಎ ಗ್ರೇಡ್ ಕಲಾವಿದೆಯಾಗಿದ್ದ ರಂಜನಿ ಅವರಿಗೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿ, ಕಲ್ಕಿ ಪ್ರಶಸ್ತಿ, ಇಸಾಯಿ ಚುಡರ್ ಪ್ರಶಸ್ತಿ, ಎಂ.ಎಸ್. ಸುಬ್ಬಲಕ್ಷ್ಮಿ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವಗಳು ಸಂದಿವೆ. ಮೃತ ರಂಜನಿ, ತಂದೆ- ತಾಯಿ, ಸಹೋದರ, ಪತಿ ಸಾಫ್ಟ್ವೇರ್ ಎಂಜಿನಿಯರ್ ಗುರುಪ್ರಸಾದ್ ಅವರನ್ನು ಅಗಲಿದ್ದಾರೆ.
ಗಣ್ಯರ ಕಂಬನಿ: ಸೋಮವಾರ ಉಡುಪಿಯ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಖ್ಯಾತ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ, ಯಕ್ಷಗಾನ ಕಲಾರಂಗದ ನಿರ್ದೇಶಕ ಹೇರಂಜೆ ಕೃಷ್ಣ ಭಟ್, ಮಂಗಳೂರಿನ ಸಂಗೀತ ಸಂಘಟಕ ನಿತ್ಯಾನಂದ ರಾವ್, ಎಂಜಿಎಂ ಕಾಲೇಜು ಪ್ರಾಂಶುಪಾಲ ಹಾಲಾ ನಾಯಕ್, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಸದಾಶಿವ ರಾವ್, ಹಿರಿಯ ಕಲಾ ವಿಮರ್ಶಕ ಎ. ಈಶ್ವರಯ್ಯ, ಸಂಸ್ಕಾರ ಭಾರತಿಯ ವಾಸುದೇವ ಭಟ್, ಆರ್ಟ್ ಆಫ್ ಲಿವಿಂಗ್ನ ಛಾಯಾಪತಿ ಗುರೂಜಿ ಮುಂತಾದವರು ಇದ್ದರು.