ಸರ್ವಿಸ್ ಬಸ್ ದಿಢೀರ್ ಮುಷ್ಕರ: ಪರದಾಡಿದ ನಾಗರಿಕರು
ಉಡುಪಿ: ಬಿಜೆಪಿ ನಾಯಕರೊಬ್ಬರು ಭಾನುವಾರ ರಾತ್ರಿ ಸರ್ವಿಸ್ ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ನಗರದ ಸರ್ವಿಸ್ ಬಸ್‌ಗಳು ಸೋಮವಾರ ದಿಢೀರ್ ಮುಷ್ಕರ ನಡೆಸಿದರು. ಇದರಿಂದ ಈ ಬಸ್ಸುಗಳನ್ನು ಅವಲಂಬಿಸಿದ್ದ ನೂರಾರು ಮಂದಿ ತೊಂದರೆ ಅನುಭವಿಸುವಂತಾಯಿತು.
ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ, ಉಡುಪಿ ನಗರಸಭೆ ಸದಸ್ಯ ಯಶಪಾಲ್ ಸುವರ್ಣ ಮತ್ತು ಇತರ 4 ಮಂದಿ ಸಹಚರರು ಭಾನುವಾರ ರಾತ್ರಿ 8.40ಕ್ಕೆ ಮಂಗಳೂರಿನಿಂದ ಬರುವಾಗ ತಮ್ಮ ಕಾರಿಗೆ ಮುಂದಕ್ಕೆ ಹೋಗಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಕಟಪಾಡಿಯಲ್ಲಿ ವಿಶಾಲ್ ಬಸ್ ಚಾಲಕ ಮಂಜುನಾಥ ಎಂಬವರನ್ನು ಥಳಿಸಿದ್ದರು. ಈ ಬಗ್ಗೆ ವಿಚಾರಿಸಿದ ಆಯಿರ ಎಂಬ ಬಸ್ಸಿನ ಚಾಲಕ ಶಂಶುದ್ದೀನ್ ಮತ್ತು ಪ್ರಯಾಣಿಕ ಲಕ್ಷಣ ಎಂಬವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮಂಜುನಾಥ ಆಸ್ಪತ್ರೆಗೆ ದಾಖಲಾಗಿದ್ದು, ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಪೋದ್ರಿಕ್ತರಾದ ಚಾಲಕರು: ಸೋಮವಾರ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಸರ್ವಿಸ್ ಬಸ್ ಸಿಬ್ಬಂದಿ ಬಂದ್‌ಗೆ ಕರೆ ನೀಡಿದರು. ಉಡುಪಿಯಿಂದ ಮಂಗಳೂರು ಮತ್ತು ಕುಂದಾಪುರ ಕಡೆಗೆ ಹೋಗುವ ಬಸ್ಸುಗಳ ಚಾಲಕರು ಮುಷ್ಕರ ನಡೆಸಿದರು. ಇದರಿಂದ ಕುಂದಾಪುರ ಮತ್ತು ಮಂಗಳೂರಿಗೆ ತೆರಳುವವರು ಪರದಾಡುವಂತಾಯಿತು. ಬೆಳಗ್ಗೆ 10 ಗಂಟೆಗೆ ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಬಸ್ ಚಾಲಕರು ಜಗ್ಗಲಿಲ್ಲ.
ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ ಬಸ್ ಮಾಲಕರು- ಚಾಲಕರ ನಡುವೆಯೂ ಬಸ್ಸು ಓಡಾಟಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆಯಿತು. ಬೇರೆ ವಾಹನಗಳಲ್ಲಿ ಜನರನ್ನು ಸಾಗಿಸುತ್ತಿದ್ದಾಗ ಬಸ್ಸು ಚಾಲಕರು ಅದಕ್ಕೂ ಅಡ್ಡಿಪಡಿಸಿದರು. ಈ ಸಂದರ್ಭ ಸರ್ವಿಸ್ ಬಸ್ ನಿಲ್ದಾಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು. ನಂತರ ಪೊಲೀಸರು ಹೆಚ್ಚುವರಿ ಸರ್ಕಾರಿ ಬಸ್ಸುಗಳನ್ನು ತರಿಸಿ ಮಂಗಳೂರು- ಕುಂದಾಪುರಕ್ಕೆ ಜನರನ್ನು ಕಳುಹಿಸಿದರು.
ಕೊನೆಗೆ ಆರೋಪಿ ಯಶಪಾಲ್ ಸುವರ್ಣ ಮತ್ತು ಇತರರು ಕಾಪು ಠಾಣೆಗೆ ಹಾಜರಾಗಿ ಕಾನೂನಿಗೆ ಶರಣಾದ ಮೇಲೆ ಮಧ್ಯಾಹ್ನದ ನಂತರ ಬಸ್ಸುಗಳ ಓಡಾಟ ಆರಂಭವಾಯಿತು. ಆದರೆ ನೂರಾರು ಮಂದಿ ಪ್ರಯಾಣಿಕರು ಬಸ್ ಚಾಲಕರ ದಿಢೀರ್ ಬಂದ್‌ನಿಂದಾಗಿ ಕಷ್ಟಪಟ್ಟರು. ಅನೇಕ ಮಂದಿ ಉದ್ಯೋಗ, ಕಚೇರಿಗೆ ತೆರಳಲಾಗದೆ ತೊಂದರೆಗೀಡಾದರು.