ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಡುಪಿಯಲ್ಲಿ ಭಾರಿ ಮಳೆ, ವ್ಯಾಪಕ ಹಾನಿ

Vishwanath S
Updated On : 12 Jun 2013, 11:09 am

ಉಡುಪಿ: ಮಂಗಳವಾರ ಮಳೆತೀವ್ರಗೊಂಡಿದ್ದು, ಮುಂದಿನ 48 ಗಂಟೆ ಕಾಲ ಮಳೆ- ಗಾಳಿ ಇನ್ನೂ ತೀವ್ರವಾಗುವ ಸಂಭವ ಇದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
 ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆ ವರೆಗೆ ಎಡೆಬಿಡದೆ ಸುರಿದ ಮಳೆಯಿಂದ ಉಡುಪಿಯಲ್ಲಿ ಚಳಿ ಆರಂಭವಾಗಿದೆ. ಮಳೆಯಿಂದ ಸ್ವಲ್ಪ ಮಟ್ಟಿಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು, ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ಅಂಗಡಿ, ಬಸ್ಸು ನಿಲ್ದಾಣಗಳಲ್ಲಿ ಜನರು ಮಳೆ ಬಿಡುವುದನ್ನು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹಲವೆಡೆ ಹಾನಿ: ಜಿಲ್ಲೆಯಾದ್ಯಂತ ಕೆಲವು ಕಡೆಗಳಲ್ಲಿ ಗಾಳಿ- ಮಳೆಯಿಂದ ಸಣ್ಣಪುಟ್ಟ ಅವಘಡಗಳು ಸಂಭವಿಸಿವೆ. ಪಡುಬಿದ್ರಿ ಸಮೀಪದ ತೆಂಕ ಎಂಬಲ್ಲಿ ಗಾಯತ್ರಿ ಎಂಬವರ ಮನೆ ಬಳಿ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ನೀರು ಸಾಗಿಸುವ ಪೈಪ್‌ಲೈನ್ ಸುತ್ತಮುತ್ತ ಸುಮಾರು 100 ಮೀ.ನಷ್ಟು ಸಮುದ್ರ ಕೊರೆತ ಆರಂಭವಾಗಿದೆ.
 ಹೆಜಮಾಡಿ ಗ್ರಾಮದ ಚಿಂಕ್ರಾ ಎಂಬವರ ಮನೆ ಮೇಲೆ ಅಡಕೆ ಮರ ಬಿದ್ದು ರು. 15 ಸಾವಿರ ನಷ್ಟ ಉಂಟಾಗಿದೆ. ಇದೇ ಗ್ರಾಮದ ಬೇಬಿ ಎಂಬವರ ಮನೆ ಕೂಡ ಗಾಳಿ- ಮಳೆಯಿಂದಾಗಿ ಭಾಗಶಃ ಹಾನಿಯಾಗಿ ಸುಮಾರು ರು. 10 ಸಾವಿರ ನಷ್ಟವಾಗಿದೆ. ಮಲ್ಲಾರು ಗ್ರಾಮದ ಫಕೀರನಕಟ್ಟೆ ಎಂಬಲ್ಲಿ ಕಲ್ಯಾಣಿ ಶೆಡ್ತಿ ಅವರ ಮನೆಯು ಗಾಳಿ- ಮಳೆಯಿಂದ ಭಾಗಶಃ ಹಾನಿಯಾಗಿ ರು. 35 ಸಾವಿರ ನಷ್ಟ ಮತ್ತು ಜಮೀದ್ ಅಲಿ ಅವರ ಮನೆ ಕೂಡ ಗಾಳಿ ಮಳೆಗೆ ಭಾಗಶಃ ಹಾನಿಯಾಗಿ ರು. 30 ಸಾವಿರ, ಪಾದೂರು ಗ್ರಾಮದ ಸುಗುಣ ಅವರ ಮನೆಗೆ ಮರದ ಕೊಂಬೆ ಬಿದ್ದು ರು. 3 ಸಾವಿರ ನಷ್ಟವಾಗಿದೆ.
ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದಲ್ಲಿ ಲಲಿತ ಎಂಬವರ ಮನೆಯ ಸಿಮೆಂಟ್ ಶೀಟ್ ಹಾರಿಹೋಗಿದ್ದು ರು. 12 ಸಾವಿರ, ಮಂಜುನಾಥ ಎಂಬವರ ಗ್ಯಾರೇಜಿನ ಸಿಮೆಂಟ್ ಶೀಟ್ ಹಾರಿ ರು. 15 ಸಾವಿರ, ಮುತ್ತಕ್ಕ ಶೆಡ್ತಿ ಮನೆ ಮೇಲೆ ತೆಂಗಿನ ಮರ ಬಿದ್ದು, ಮನೆ ಬಿರುಕುಂಟಾಗಿ ರು. 25 ಸಾವಿರ ನಷ್ಟವಾಗಿದೆ. ಉಳ್ತೂರು ಗ್ರಾಮದ ಸುಗಂಧ ಶೆಡ್ತಿ ಮನೆಯ ಮಾಡಿನ ಮೇಲೆ ಗೋಡೆ ಕುಸಿದು ರು. 25 ಸಾವಿರ, ಬಳ್ಕೂರು ಗ್ರಾಮದ ಕಳ್ಳಿಗುಡ್ಡೆ ನಿವಾಸಿ ಸಂಜೀವ ಮೊಗೇರ ಅವರ ಮನೆ ಗೋಡೆ ಕುಸಿದು ರು. 4 ಸಾವಿರ, ವಡೇರಹೋಬಳಿಯ ರಾಯಪ್ಪನಮಠ ರಸ್ತೆ ಬಳಿ ರಾಘವೇಂದ್ರ ಭಂಡಾರಿ ಎಂಬವರ ದನದ ಕೊಟ್ಟಿಗೆ ಮೇಲೆ ಮಾವಿನ ಮರ ಬಿದ್ದು ರು. 10 ಸಾವಿರ ಹಾನಿಯಾಗಿದೆ. ಕಾರ್ಕಳ ತಾಲೂಕಿನಲ್ಲಿಯೂ ವಿಪರೀತ ಮಳೆಯಿಂದಾಗಿ ಕಾಂತಾವರ ಗ್ರಾಮದ ವಸಂತ ಪೂಜಾರಿ ಮನೆಯು ಗಾಳಿ ಮಳೆಗೆ ಮನೆ ಬಿದ್ದು ರು. 34,800 ಮತ್ತು ನಾಡ್ಪಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿದು ರು. 20 ಸಾವಿರ ನಷ್ಟ ಸಂಭವಿಸಿದೆ.
ಮಳೆ ವಿವರ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ವರೆಗೆ ಸರಾಸರಿ 76.10 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 56.5 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 83.0 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 88.8 ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement