ಗುಟ್ಕಾ ನಿಷೇಧದಿಂದ ಅಡಕೆ ಬೆಳೆಗಾರರಿಗೆ ನಷ್ಟವಾಗಿಲ್ಲ
ಪಡುಬಿದ್ರಿ: ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿರುವುದರಿಂದ ಅಡಕೆ ಧಾರಣೆಯಲ್ಲಿ ಯಾವುದೇ ವ್ಯತ್ಯಯ ಅಥವಾ ಅಡಕೆ ಬೆಳೆಗಾರರಿಗೆ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಇಲ್ಲಿನ ನವೀಕರಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಬಡವರ್ಗದ ಜನರು ಮತ್ತು ಕಾರ್ಮಿಕರ ಮೇಲೆ ಗುಟ್ಕಾ ಅತಿ ಹೆಚ್ಚು ದುಷ್ಪರಿಣಾಮ ಬೀರಿದೆ. ಆದ್ದರಿಂದ ಆರೋಗ್ಯದ ಕಾಳಜಿಯಿಂದ ಗುಟ್ಕಾ ನಿಷೇಧಿಸಲಾಗಿದೆ ಎಂದರು.
ಆಂಬುಲೆನ್ಸ್ ಒದಗಿಸಲು ಕ್ರಮ: ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಪ್ರಯತ್ನ ನಡೆಸುವುದಾಗಿ ಹೇಳಿದ ಸೊರಕೆ, ರಾಷ್ಟ್ರೀಯ ಹೆದ್ದಾರಿ, ಪಡುಬಿದ್ರಿ ಆಸುಪಾಸಿನಲ್ಲಿ ನಿತ್ಯ ಅಪಘಾತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ 108 ಆಂಬುಲೆನ್ಸ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರದ ನವೀಕರಣಕ್ಕೆ ಕಾರಣೀಭೂತರಾದ ಪಡುಬಿದ್ರಿ ಗ್ರಾಪಂ ಪೂರ್ವಾಧ್ಯಕ್ಷೆ ವಿಜಯಲಕ್ಷ್ಮೀ ಆಚಾರ್ಯ ಹಾಗೂ ಕಟ್ಟಡ ಗುತ್ತಿಗೆದಾರ ದಿನೇಶ್ ಕಾಮತ್ರನ್ನು ಸನ್ಮಾನಿಸಲಾಯಿತು. ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್, ಯುಪಿಸಿಎಲ್ ಉಪಾಧ್ಯಕ್ಷ ವಿ. ರಾಮಚಂದ್ರ ಭಟ್, ಹಿರಿಯ ಪ್ರಬಂಧಕ ಸುದರ್ಶನ ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಶ್ರೀಯಾನ್, ತಾಪಂ ಅಧ್ಯಕ್ಷೆ ಗೌರಿ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ತಾಪಂ ಸದಸ್ಯರಾದ ಭಾಸ್ಕರ್ ಪಡುಬಿದ್ರಿ, ಸುಮನಾ ಕಿಶೋರ್, ಅಮಿತಾ ಪೂಜಾರಿ ಇದ್ದರು.
ನವೀಕರಿಸಿದ್ದು ಯುಪಿಸಿಎಲ್, ಉದ್ಘಾಟಿಸಿದ್ದು ಸೊರಕೆ!
ಸುಮಾರು ರು. 18 ಲಕ್ಷ ವೆಚ್ಚದಲ್ಲಿ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನವೀಕರಿಸಿದ್ದು ಉಡುಪಿ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಯುಪಿಸಿಎಲ್). ಈ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಗೆ ಜನರು ತೀವ್ರ ವಿರೋಧಿಸಿದಾಗ ಆಗಿನ ಸಂಸದರಾಗಿದ್ದ ಸೊರಕೆ ಅವರು ಹೋರಾಟಗಳಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸೊರಕೆ ವಿರುದ್ಧವೂ ಪ್ರಕರಣ ಕೂಡ ದಾಖಲಾಗಿ ಇಂದಿಗೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅಂತಹ ಯೋಜನೆಯ ಪ್ರಾಯೋಜಕತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನವೀಕರಿಸಿದ್ದು ಮತ್ತು ಅದನ್ನು ವಿರೋಧಿಸಿದ್ದ ಅಂದಿನ ಸಂಸದ, ಇಂದಿನ ಸಚಿವರು ಉದ್ಘಾಟನೆ ನೆರವೇರಿಸಿದ್ದು ಅಚ್ಚರಿಗೆ ಕಾರಣವಾಯಿತು.