ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ವಸಂತ ಸಾಲ್ಯಾನ್
ಉಡುಪಿ: ಉಡುಪಿ ಜಿಲ್ಲಾ ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ವಸಂತ ವಿ. ಸಾಲ್ಯಾನ್ ಅವರನ್ನು ನೇಮಕ ಮಾಡಲಾಗಿದೆ. ಜಾತ್ಯತೀತ ಜನತಾದಳ ಪಕ್ಷವನ್ನು ಜಿಲ್ಲೆಯಲ್ಲಿ ಪುನರ್ ಸಂಘಟಿಸಿ ಶಿಸ್ತುಬದ್ಧವಾಗಿ ಗ್ರಾಮೀಣ ಮಟ್ಟದಲ್ಲಿ ಬೆಳೆಸುವುದಕ್ಕೆ ಕಿರಿಯ ಮತ್ತು ಹಿರಿಯ ನಾಯಕರ ಮಧ್ಯೆ ಸಮನ್ವಯ ಸಾಧಿಸಿ ಪಕ್ಷದಲ್ಲಿ ಸಕ್ರಿಯಗೊಳಿಸುವುದಕ್ಕಾಗಿ ಈ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಸಾಲ್ಯಾನ್ ಜಿಲ್ಲೆಯ ಹಿರಿಯ, ಅನುಭವಿ ರಾಜಕಾರಣಿಯಾಗಿ ಕಾಪು ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ, 2 ಬಾರಿ ಸಚಿವರಾಗಿದ್ದಾರೆ. ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರು ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷರು ಜತೆಯಾಗಿ ಕಾರ್ಯನಿರ್ವಹಿಸಿ ಪಕ್ಷ ಸಂಘಟಿಸುವಂತೆ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೆಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಲಹೆಯಂತೆ ಈ ನೇಮಕ ಮಾಡಲಾಗಿದೆ ಎಂದು ದೇವಿಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.