ಉಡುಪಿ: ಹನಿ ಮಳೆ
ಉಡುಪಿ: ಬುಧವಾರ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಬೆಳಗ್ಗೆ ಸ್ವಲ್ಪ ಹೊತ್ತು ಕಾಣಿಸಿಕೊಂಡು ಬಳಿಕ ಹನಿ ಮಳೆಗೆ ಸೀಮಿತವಾಗಿತ್ತು. ಮಧ್ಯಾಹ್ನ ನಂತರದಲ್ಲಿ ಮೋಡ ಕವಿದ ವಾತಾವರಣವಿತ್ತು.
ಬುಧವಾರ ಬೆಳಗ್ಗೆ ಸುರಿದ ಗಾಳಿ- ಮಳೆಯಿಂದಾಗಿ ಉಡುಪಿಯ ಗಿಳಿಯಾರು ಗ್ರಾಮದ ರಾಘವೇಂದ್ರ ಎಂಬವರ ಬಾವಿ ಕುಸಿದಿದ್ದು, ರು. 25 ಸಾವಿರ ಹಾನಿಯಾಗಿದೆ. ಉದ್ಯಾವರ ಪಡುಕೆರೆ ಬಳಿ ಕಡಲ್ಕೊರೆತ ಉಂಟಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಕುಂದಾಪುರದಲ್ಲಿನ ಗಂಗೊಳ್ಳಿ ಗ್ರಾಮದ ಬಾಬು ಪೂಜಾರಿ ಎಂಬವರ ಮನೆಯು ಗಾಳಿ- ಮಳೆಗೆ ಭಾಗಶಃ ಹಾನಿಯಾಗಿ ರು. 20 ಸಾವಿರ ನಷ್ಟ ಸಂಭವಿಸಿದೆ. ಕಾರ್ಕಳದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಮಳೆ ವಿವರ: ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ವರೆಗೆ 86.73 ಮಿ.ಮೀ. ಸರಾಸರಿ ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 75 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 80.40 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 104.80 ಮಿ.ಮೀ. ಮಳೆ ದಾಖಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಜೋರಾಗಿ ಗಾಳಿ ಬೀಸುವುದರ ಜೊತೆಗೆ ಮಳೆ ಬರುವ ಸಂಭವವಿದ್ದು, ಕರಾವಳಿ ತೀರದ ಜನರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಸೂಚಿಸಿದೆ.
ಮಳೆ; ಮನೆಗಳಿಗೆ ಹಾನಿ
ಕಾರ್ಕಳ: ಕಾರ್ಕಳದಲ್ಲಿ ಬುಧವಾರ ಧಾರಾಕಾರ ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ತಾಲೂಕಿನ ಕಾಂತಾವರ ಗ್ರಾಮದ ವಸಂತ ಎಂಬವರ ಮನೆ ಮಳೆಯಿಂದ ಜಖಂಗೊಂಡು 35 ಸಾವಿರ, ಮುದ್ರಾಡಿ ಗ್ರಾಮದ ಬಕ್ರೆ ನಿವಾಸಿ ದೇವದಾಸ್ ಎಂಬವರ ಮನೆಗೆ ಹಾನಿಯಾಗಿ 7 ಸಾವಿರ ಸೇರಿದಂತೆ ನಾಡ್ಪಾಲು ಗ್ರಾಮದ ಸೋಮೇಶ್ವರ ಪೇಟೆ ಮುಚ್ಚಿದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹಾನಿಯಾಗಿ 25 ಸಾವಿರ ಹಾನಿಯಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.