ಪುತ್ತೂರಿನ ಇಬ್ಬರು ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ
ಮಂಗಳೂರು: ಕ್ಯಾಂಪ್ಕೋ ಅಡಕೆ ಸಂಶೋಧನಾ ಪ್ರತಿಷ್ಠಾನದ ಸಂಶೋಧಕ, ಪ್ರಗತಿಪರ ಕೃಷಿಕ ಬದನಾಜೆ ಶಂಕರ ಭಟ್ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪುತ್ತೂರಿನ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಬಹುಮಾನ ಮತ್ತು ಚಿನ್ನದ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆ ವಿಜ್ಞಾನ ಶಿಕ್ಷಕಿ ವಸಂತಿ ಭಟ್ ಹೇಳಿದ್ದಾರೆ.
ಶುಕ್ರವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿರುವ ರಶ್ಮಿ ಪಾರ್ವತಿ ಅಮೆರಿಕಾದ ಹ್ಯೂಸ್ಟನ್‌ನಲ್ಲಿ ಮೇ 8ರಿಂದ 13ರ ವರೆಗೆ ನಡೆದ ಒಲಿಂಪಿಯಾಡ್ 2013 ವಿಜ್ಞಾನ ಮೇಳದಲ್ಲಿ 'ತೆಂಗಿನಗರಿ-ಕೊತ್ತಳಿಕೆಯಿಂದ ಔಷಧೀಯ ಉಪ್ಪು ತಯಾರಿ' ಕುರಿತು ಪ್ರಬಂಧ ಮಂಡಿಸಿದ್ದರು.
ರಾಮಕೃಷ್ಣ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಿಂಧೂರ ಶಂಕರ್ 'ವೃಕ್ಷಗಳ ಫಲವತ್ತತೆ ಹೆಚ್ಚಿಸುವ ಹಾಗೂ ಕೀಟ, ಶಿಲೀಂಧ್ರ ನಾಶಕ ಔಷಧಿಯ ತಯಾರಿ' ಪ್ರಬಂಧವನ್ನು ನೆದರ್‌ಲ್ಯಾಂಡ್‌ನಲ್ಲಿ ನಡೆದ ಇನೆಸ್ಫೋ 2013 ವಿಜ್ಞಾನ ಮೇಳದಲ್ಲಿ ಪ್ರಸ್ತುತಪಡಿಸಿದ್ದರು. ಇವರು ಕೂಡ ಚಿನ್ನದ ಪದಕ ಹಾಗೂ ಪ್ರಥಮ ಬಹುಮಾನ ಪಡೆದಿದ್ದರು.
ಇದೇ ಶಾಲೆಯ ವಿದ್ಯಾರ್ಥಿಗಳಾದ ಧೀಮಂತ್ ಸೇಡಿಯಾಪು, ಶ್ರೀಕುಮಾರ್‌ರವರು ವಸಂತಿ ಭಟ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಪ್ರಬಂಧಕ್ಕೆ ರಜತ ಬಹುಮಾನ ಗಳಿಸಿದ್ದಾರೆ. ಇವರು 'ಡೆವಲಪ್‌ಮೆಂಟ್ ಆಫ್ ಆನ್ ಇಫೆಕ್ಟಿವ್ ಬಯೋಸೈಡ್ ಫ್ರಂ ಎಕೇಶಿಯಾ ಕಾನ್‌ಸಿನ್ನ' ಪ್ರಬಂಧ ಮಂಡಿಸಿದ್ದರು. ಪುತ್ತೂರಿನ ಆದಿತ್ಯ ಎಸ್.ಎನ್ ಮತ್ತು ಶಿವಪ್ರಸಾದ್ ಅವರು ರೇಖಾ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ ಪ್ರಬಂಧಕ್ಕೆ ರಜತ ಬಹುಮಾನ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಶ್ಮಿ ಪಾರ್ವತಿ, ಸಿಂಧೂರ ಶಂಕರ್, ಬದನಾಜೆ ಶಂಕರ ಭಟ್ ಇದ್ದರು.