ಮೂವರು ಪ್ರೌಢಶಾಲೆ ವಿದ್ಯಾರ್ಥಿಗಳು ನಾಪತ್ತೆ
ಬ್ರಹ್ಮಾವರ: ಇಲ್ಲಿನ ಶಿರಿಯಾರ ಗ್ರಾಮದ ಸಾಯ್ಬರಕಟ್ಟೆ ಎಂಬಲ್ಲಿನ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ. ಕಾಣೆಯಾದ ವಿದ್ಯಾರ್ಥಿಗಳು 10ನೇ ತರಗತಿಯ ಸಹಪಾಠಿಗಳಾದ ಶ್ರೀಕಾಂತ (16), ಕೀರ್ತೇಶ್ (16) ಮತ್ತು 9ನೇ ತರಗತಿಯ ಆನಂದ (15) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಇಲ್ಲಿನ ಸಮೀಪದ ಹೆಸ್ಕತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಅವರೆಲ್ಲರೂ ಎಂದಿನಂತೆ ಶುಕ್ರವಾರ ಬೆಳಗ್ಗೆ ಶಾಲೆಗೆ ಹೋಗಿದ್ದರು. ಆದರೆ, ಸಂಜೆ ಮನೆಗೂ ಹಿಂತಿರುಗಿಲ್ಲ. ಕಳವಳಗೊಂಡ ಮನೆಯವರು ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿಲ್ಲ. ಶಾಲೆಯಲ್ಲಿ ಕೇಳಿದರೆ ಶಾಲೆಗೂ ಬಂದಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ. ಅವರಲ್ಲಿ ಆನಂದ ಎಂಬಾತ ಗುರುವಾರ ಕೂಡ ಶಾಲೆಗೆ ಹೋಗಿಲ್ಲ ಎನ್ನಲಾಗಿದೆ. ಮೂವರು ಕೂಡ ಬ್ರಹ್ಮಾವರದಲ್ಲಿ ಉಡುಪಿಗೆ ಹೋಗುವ ಬಸ್ಸು ಹತ್ತಿದ್ದಾರೆ ಎನ್ನುವ ವದಂತಿ ಕೇಳಿ ಬಂದಿವೆ. ಶುಕ್ರವಾರ ತಡರಾತ್ರಿಯವರೆಗೂ ಹೆತ್ತವರು ಬ್ರಹ್ಮಾವರ ಠಾಣೆಗೆ ದೂರು ನೀಡಿರಲಿಲ್ಲ.