ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸಮುದ್ರ ಕೊರೆತ-ಈ ಬಾರಿ ತಾತ್ಕಾಲಿಕ ಪರಿಹಾರವಷ್ಟೇ: ವಿನಯಕುಮಾರ್ ಸೊರಕೆ

Vishwanath S
Updated On : 16 Jun 2013, 11:08 am

ಉಡುಪಿ: ರಾಜ್ಯದ ಕರಾವಳಿ ಪ್ರದೇಶದಲ್ಲಿ ಪ್ರತಿ ಮಳೆಗಾಲದಲ್ಲಿಯೂ ಆತಂಕ ಸೃಷ್ಟಿಸುತ್ತಿರುವ ಸಮುದ್ರ ಕೊರೆತ ನಿಯಂತ್ರಣಕ್ಕೆ ಮುಂದಿನ ಮಳೆಗಾಲಕ್ಕೆ ಮೊದಲು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಈ ಬಾರಿ ತಡವಾಗಿರುವುದರಿಂದ ಕೊರೆತ ಆರಂಭವಾಗಿರುವ ಪ್ರದೇಶಗಳಲ್ಲಿ ತಾತ್ಕಾಲಿಕ ಪರಿಹಾರವನ್ನಷ್ಟೇ ಮಾಡಲು ಸಾಧ್ಯ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಶನಿವಾರ ಸಂಜೆ ಪಡುಬಿದ್ರಿಯ ತೆಂಕ ಎರ್ಮಾಳು, ಉದ್ಯಾವರ ಗ್ರಾಮದ ಪಡುಕರೆ, ಕನಕೋಡ ಪರಿಸರದಲ್ಲಿ ತೀವ್ರಗೊಂಡಿರುವ ಸಮುದ್ರಕೊರೆತ ಪ್ರದೇಶ ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಮುದ್ರ ಕೊರೆತ ಉಂಟಾಗುವ ಕಡೆಗಳಲ್ಲಿ ಶಾಶ್ವತ ಪರಿಹಾರಕ್ಕಾಗಿ ಏಷ್ಯನ್ ಡೆವೆಲಪ್ ಬ್ಯಾಂಕ್‌ನಿಂದ ರು. 192 ಕೋಟಿ ಸಾಲ ಮಂಜೂರಾಗಿದೆ. ಈ ಅನುದಾನದಲ್ಲಿ ಕಡಲ್ಕೊರೆತ ನಿವಾರಿಸಲು ಯೋಜನೆ ಸಿದ್ಧಗೊಂಡಿದ್ದು, ಮಂಗಳೂರಿನ ಉಳ್ಳಾಲದಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರು. 10 ಕೋಟಿ ಅನುದಾನಕ್ಕೆ ಪ್ರಸಾಪ: ಪ್ರಸ್ತುತ ಉಡುಪಿ ಜಿಲ್ಲೆಯ ಎಲ್ಲೆಲ್ಲಿ ಸಮುದ್ರ ತೀರದ ರಸ್ತೆ, ಮನೆ, ತೋಟ ಮುಂತಾದವುಗಳಿಗೆ ತೊಂದರೆ ಇದೆಯೋ ಅಲ್ಲಿ ಕಲ್ಲುಗಳನ್ನು ಹಾಕುವ ಮೂಲಕ ತಾತ್ಕಾಲಿಕ ಪರಿಹಾರ ಮಾಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ಮುಖ್ಯಮಂತ್ರಿಗೆ ರು. 10  ಕೋಟಿ ಅನುದಾನಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ತಾನು ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಬಂದರು ಸಚಿವರು ಕೂಡ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ್ದಾರೆ, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಇದರ ಪ್ರಸ್ತಾಪ ಮಾಡಲಾಗಿದೆ ಎಂದು ಸೊರಕೆ ತಿಳಿಸಿದರು.
ಉದ್ಯಾವರ ಪಡುಕರೆ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಭೀಕರ ಕಡಲ ಕೊರೆತ ಆಗುತ್ತಿದೆ. ಭಾನುವಾರ ಬೆಳಗ್ಗೆಯಿಂದಲೇ ಇಲ್ಲಿ ಕಲ್ಲುಗಳನ್ನು ಹಾಕಿ ರಸ್ತೆ, ವಿದ್ಯುತ್ ಕಂಬ, ಮನೆ ಮೊದಲಾದವುಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬ್ರೇಕ್ ವಾಟರ್- ಯೋಜನೆ: ಕಡಲ್ಕೊರೆತಕ್ಕೆ ಬ್ರೇಕ್ ವಾಟರ್ ಕೂಡ ಒಂದು ಉತ್ತಮ ಪರಿಹಾರ. ಈಗಾಗಲೇ ಮಂಗಳೂರು, ಮಲ್ಪೆ ಬಂದರು ಪ್ರದೇಶದಲ್ಲಿ ಇದು ಯಶಸ್ವಿಯಾಗಿದೆ. ಬ್ರೇಕ್ ವಾಟರ್ ಇರುವಲ್ಲಿ ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಸಮುದ್ರ ಕೊರೆತ ಸಂಭವಿಸುತ್ತಿಲ್ಲ. ಆದ್ದರಿಂದ ಈ ಕ್ರಮದ ಬಗ್ಗೆಯೂ ಯೋಚಿಸಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭ ಸಚಿವರೊಂದಿಗೆ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು, ಮೀನುಗಾರಿಕೆ ಮತ್ತು ಬಂದರು ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ರಾಥೋಡ್, ತಹಸೀಲ್ದಾರ್ ಅಭಿಜಿನ್, ಜಿ.ಪಂ. ಸದಸ್ಯ ದಿವಾಕರ ಕುಂದರ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement