ಬೆಟ್ಟಿಂಗ್ ಗೀಳು: ಯುವಕ ಆತ್ಮಹತ್ಯೆ
ಉಡುಪಿ: ಕಾರ್ಕಳ ತಾಲೂಕಿನ ಕುಕ್ಕುಂದೂರು ಎಂಬಲ್ಲಿ ಕ್ರಿಕೆಟ್ ಬೆಟ್ಟಿಂಗ್ಗೆ ಯುವಕ ಬಲಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶಂಕರ ಪೂಜಾರಿ ಎಂಬವರ ಮಗ ಅಶ್ವತ್ಥ್ ಪೂಜಾರಿ (18) ಹೊಟೇಲಿನಲ್ಲಿ ಅನ್ನಕ್ಕೆ ವಿಷ ಸೇರಿಸಿ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತನಿಗೆ ವಿಪರೀತ ಕ್ರಿಕೆಟ್ ಬೆಟ್ಟಿಂಗ್ ಚಟ ಇತ್ತು. ಇದೇ ಕಾರಣಕ್ಕೆ ನಷ್ಟ ಅನುಭವಿಸಿ ಜೂ.10ರಂದು ಇಲ್ಲಿನ ಕಸಬ ಗ್ರಾಮದ ಹೊಟೇಲಿನಲ್ಲಿ ಊಟದಲ್ಲಿ ಇಲಿ ಪಾಷಾಣ ಬೇರಿಸಿ ಅದನ್ನು ಸೇವಿಸಿದ್ದ. ನಂತರ ಆತನ ನರಳಾಟ ಕಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜೂ.16ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿಯೂ ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಅಶ್ವತ್ಥ್ ಸೋಮವಾರ ಮೃತಪಟ್ಟಿದ್ದಾನೆ. ಈ ಬಗ್ಗೆ ಆತನ ತಂದೆ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತ ಇತ್ತೀಚೆಗೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ, ಆದರೆ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡು, ಅನೇಕ ಮಂದಿಗೆ ಹಣ ಕೊಡುವುದಕ್ಕೆ ಬಾಕಿ ಇರಿಸಿದ್ದ. ಅವರು ಈತನ ಬೆನ್ನು ಬಿದ್ದುದರಿಂದ ಬೇರೆ ದಾರಿ ಇಲ್ಲದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.