ಮೀನು ಮಾರುಕಟ್ಟೆ ಕಾಮಗಾರಿ ಶೀಘ್ರ ಆರಂಭಿಸಲು ಸೂಚನೆ
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಕಾಲೇಜು ರಸ್ತೆಯ ಮೀನು ಮಾರುಕಟ್ಟೆ ಪುನರ್ ನಿರ್ಮಾಣ ಕಾಮಗಾರಿಯನ್ನು ಜೂ.30ರೊಳಗೆ ಗುತ್ತಿಗೆದಾರರಿಗೆ ನೀಡುವಂತೆ ಬಂದರು ಮತ್ತು ಉಡುಪಿ ಮೀನುಗಾರಿಕಾ ಇಲಾಖೆ ಕಾರ್ಯ ನಿರ್ವಾಹಕ ಮುಖ್ಯ ಎಂಜಿನಿಯರ್‌ಗೆ ಶಾಸಕ ಪ್ರಮೋದ್ ಮಧ್ವರಾಜ್ ಸೂಚಿಸಿದ್ದಾರೆ.
ಈ ಮೀನು ಮಾರುಕಟ್ಟೆಯನ್ನು ತಾತ್ಕಾಲಿಕ ಸ್ಥಳಾಂತರಗೊಳಿಸಲಾಗಿದ್ದು, ಸಾಕಷ್ಟು ತಿಂಗಳು ಕಳೆದರೂ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಸೋಮವಾರ ತಮ್ಮ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ, ಈ ಕಟ್ಟಡ ವಿನ್ಯಾಸವನ್ನು ಜೂ.20ರೊಳಗೆ ರಚಿಸಿ ಕೊಡುವಂತೆ ಕರಾವಳಿ ಪ್ರಾಧಿಕಾರದ ಕಾರ್ಯದರ್ಶಿಗೆ ಸೂಚಿಸಲಾಯಿತು. ಅಲ್ಲದೆ, ಜೂ.30ರೊಳಗೆ ಈ ಕಾಮಗಾರಿಯನ್ನು ಗುತ್ತಿಗೆದಾರರಿಗೆ ನೀಡುವಂತೆ ಬಂದರು ಮತ್ತು ಮೀನುಗಾರಿಕಾ ಇಲಾಖೆಗೆ ಸೂಚಿಸಲಾಯಿತು.
ಮಲೇರಿಯಾ, ಡೆಂಘೀ ಮಾಹಿತಿ ಕಾರ್ಯಕ್ರಮ
ಉಡುಪಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ಭಾರತ್ ನಿರ್ಮಾಣ್ ಸ್ವಯಂ ಸೇವಕರ ತಂಡ, ಸ್ಥಳೀಯ ಸಂತ ಮೇರಿ ಪ್ರೌಢ ಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ಶಾಲೆ ಸಭಾಂಗಣದಲ್ಲಿ ಮಲೇರಿಯಾ ಮತ್ತು ಡೆಂಘೀ ಜ್ವರ ಕುರಿತು ಮಾಹಿತಿ ಮತ್ತು ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ದೇವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದು, ಭಾ.ನಿ.ಸ್ವ. ತಂಡ ವತಿಯಿಂದ ಮುದ್ರಿಸಿದ ಮಲೇರಿಯಾ ಮಾಹಿತಿ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಅವರು ಮಲೇರಿಯಾ, ಫೈಲೇರಿಯಾ, ಡೆಂಘೀ, ಚಿಕೂನ್ ಗುನ್ಯ ರೋಗಗಳ ಬಗ್ಗೆ ಹಾಗೂ ಅವು ಹರಡುವ ವಿಧಾನ ಮತ್ತು ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಅಂಡರ್ 25 ಕ್ರಿಕೆಟ್ ತಂಡ ಆಯ್ಕೆ
ಮಣಿಪಾಲ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ವತಿಯಿಂದ ಉಡುಪಿ ಜಿಲ್ಲಾ 25ರ ಕೆಳಹರೆಯದ ಕ್ರಿಕೆಟ್ ತಂಡಕ್ಕೆ ಇತ್ತೀಚೆಗೆ ಆಯ್ಕೆ ನಡೆಸಲಾಯಿತು. ಈ ತಂಡದಲ್ಲಿ ಸಲೀಂ ಜಾವೇದ್ (ಮಣಿಪಾಲ ವಿವಿ), ರೆನ್ ಡಯಾಸದ್ (ಮಣಿಪಾಲ ವಿವಿ), ಅಭಿಷೇಕ್ (ಎಂ.ಜಿ.ಎಂ. ಕಾಲೇಜು, ಉಡುಪಿ), ಸನ್ ರೇ ಜೋಸೆಫ್ ಡಿಸೋಜ (ಕುಂದಾಪುರ), ಸುಕೇಶ್ ಅಮೀನ್ (ಎಸ್.ಎಂ.ಎಸ್. ಬ್ರಹ್ಮಾವರ), ದೀಪಕ್ (ಸರ್ಕಾರಿ ಕಾಲೇಜು, ತೆಂಕನಿಡಿಯೂರು), ಸುಕೇಶ್ ಪೂಜಾರಿ (ಎಂ.ಜಿ.ಎಂ. ಕಾಲೇಜು, ಉಡುಪಿ), ನಿಶಾಂತ್ ಹೆಗ್ಡೆ (ಬ್ರಹ್ಮಾವರ), ಸತ್ಯಪ್ರಸಾದ್ (ಉಡುಪಿ), ರಿತೇಶ್ ಭಟ್ಕಳ್ (ಮಣಿಪಾಲ), ನವೀನ್ ಶೆಟ್ಟಿ (ಬ್ರಹ್ಮಾವರ), ಆಶ್ರೀನ್(ಉಡುಪಿ), ಭರತ್ ದುರಿ (ಉಡುಪಿ), ಸಯ್ಯದ್ ಮುತಾಹಿರ್ (ಮಣಿಪಾಲ), ನಿಶಾನ್ ಕುಮಾರ್(ಭಂಡಾರ್ಕರ್ಸ್ ಕಾಲೇಜು, ಕುಂದಾಪುರ), ಲೋಕೇಶ್ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಆಯ್ಕೆಯಾಗಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣಿತ ಬೋಧನ ವಿಧಾನ ಕಾರ್ಯಕ್ರಮ
ಉಡುಪಿ: ಇಲ್ಲಿನ ಡಾ. ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಗಣಿತ ಬೋಧನ ವಿಧಾನ ಎಂಬ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಹಿರಿಯಡ್ಕದ ಸ.ಪ.ಪೂ. ಕಾಲೇಜಿನ ಗಣಿತ ಉಪನ್ಯಾಸಕ ಸೀತಾರಾಮ ಶೆಟ್ಟಿಗಾರ್ ಪಾಲ್ಗೊಂಡಿದ್ದರು. ಅವರು 'ಗಣಿತ ಕಲಿಕೆಯಲ್ಲಿ ಶ್ರದ್ಧೆ' ಎಂಬ ಬಗ್ಗೆ ಉಪನ್ಯಾಸ ನೀಡಿದರು. ಪ್ರಾಚಾರ್ಯ ಡಾ. ಮಹಾಬಲೇಶ್ವರ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಶಿಕ್ಷಕ ಸದ್ದಾಂ ಹುಸೇನ್ ಸ್ವಾಗತಿಸಿದರು. ಉಷಾ ಜಿ.ಎಲ್. ವಂದಿಸಿದರು. ಶ್ರೀದೇವಿ ಮತ್ತು ಶ್ರೀಕಾಂತ್ ನಿರ್ವಹಿಸಿದರು. ಗಣಿತ ಬೋಧನ ವಿಧಾನ ಉಪನ್ಯಾಸಕಿ ರೂಪಾ ಕೆ. ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿ ಶಿಕ್ಷಕರು ಗಣಿತ ಬೋಧನೆಗೆ ಪೂರಕವಾದ ಒಗಟು ಬಿಡಿಸುವಿಕೆ, ಅಭಿನಯ ಗೀತೆ, ಮೊದಲಾದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.