ಮೆಸ್ಕಾಂ ವಿರುದ್ಧ ಪ್ರತಿಭಟನೆ
ಕಾರ್ಕಳ: ಸಾಣೂರು ಗ್ರಾಮ ಪಂ. ಪರಿಸರದಲ್ಲಿ ಮೆಸ್ಕಾಂ ಇಲಾಖೆಯ ಕಣ್ಣಾಮುಚ್ಚಾಲೆಯಿಂದ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಮಳೆಗಾಲ ಪ್ರಾರಂಭವಾದ ನಂತರ ವಿದ್ಯುತ್ ಕಣ್ಣುಮುಚ್ಚಾಲೆಯಿಂದಾಗಿ ಸಾಣೂರಿನ ವಿದ್ಯುತ್ ಗ್ರಾಹಕರು ತೀವ್ರ ತೊಂದರೆ ಪಡುವಂತಾಗಿದ್ದು, ಕೂಡಲೇ ಮೆಸ್ಕಾಂ ಇಲಾಖೆ ಗಮನಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಾಣೂರಿನಲ್ಲಿ 40ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು, ಕೃಷಿಕರು, ವಿದ್ಯಾರ್ಥಿಗಳು, ವಾಣಿಜ್ಯ ವ್ಯವಹಾರ ಸಂಸ್ಥೆಗಳು ಮತ್ತು ಸಾಮಾನ್ಯ ಗೃಹಬಳಕೆಯ ವಿದ್ಯುತ್ ಗ್ರಾಹಕರು ಕಾರ್ಕಳ ಮೆಸ್ಕಂನ ವಿಳಂಬಗತಿ ಮತ್ತು ಉದಾಸೀನ ಪ್ರವೃತ್ತಿಯಿಂದಾಗಿ ಕಳೆದ ಹಲವಾರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಇಲಾಖಾಧಿಕಾರಿಗಳು ವರ್ಷಕ್ಕೆರಡು ಗ್ರಾಮಸಭೆ ಮತ್ತು ಎರಡು ತಿಂಗಳಿಗೊಮ್ಮೆಯಾದರೂ ಗ್ರಾಹಕರ ಸಮಸ್ಯೆಗಳನ್ನು ವಿದ್ಯುತ್ ಬಳಕೆದಾರರ ಸಭೆ ಕರೆದು ಚರ್ಚಿಸಿ ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆ ತರಬೇಕು. ಈ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂಬುದಾಗಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.