ಉಡುಪಿ ಜಿಲ್ಲೆ: ಧಾರಾಕಾರ ಮಳೆ: ಕೆಲವೆಡೆ ಹಾನಿ
ಉಡುಪಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮಂಗಳವಾರವೂ ತನ್ನ ಪ್ರತಾಪ ಮುಂದುವರಿಸಿದ್ದು, ಸೋಮವಾರ ರಾತ್ರಿ ಎಡೆಬಿಡದೆ ಸುರಿದ ಗಾಳಿ ಸಹಿತ ಮಳೆಯಿಂದ ಅಲ್ಲಲ್ಲಿ ಸಣ್ಣಪುಟ್ಟ ಅವಘಡಗಳು ಸಂಭವಿಸಿವೆ.
ಕಾರ್ಕಳದ ಈದು ಗ್ರಾಮದ ಮೂಡ್ಲಬೆಟ್ಟು ಎಂಬಲ್ಲಿ ಶೋಭಾ ಶೆಟ್ಟಿ ಎಂಬವರ ಮನೆಗೆ ಮರಬಿದ್ದು ಭಾಗಶಃ ಹಾನಿಯಾಗಿ ರು. 3 ಸಾವಿರ ಮತ್ತು ಜಾರ್ಕಳದ ಸುಂದರಿ ಎಂಬವರಿಗೆ ಸೇರಿದ ಹಟ್ಟಿಕೊಟ್ಟಿಗೆಗೆ ಮರಬಿದ್ದು ಭಾಗಶಃ ಹಾನಿಯಾಗಿ ರು. 10 ಸಾವಿರ ನಷ್ಟವಾಗಿದೆ.
ಉಡುಪಿ ಕೆಳಪರ್ಕಳ ಎಂಬಲ್ಲಿ ಪ್ರಮೀಳಾ ಅವರ ಮನೆ ಗಾಳಿ ಮಳೆಗೆ ಭಾಗಶಃ ಹಾನಿಯಾಗಿ ರು. 5 ಸಾವಿರ ನಷ್ಟ ಉಂಟಾಗಿದೆ. ಪಾಂಗಾಳ ಗ್ರಾಮದ ಬ್ರಿಡ್ಜ್ ಹತ್ತಿರವಿರುವ ಸುಂದರಿ ಎಂಬವರ ಮನೆ ಕುಸಿದು ರು. 30 ಸಾವಿರ ನಷ್ಟ ಉಂಟಾಗಿದೆ.
ಮಳೆ ವಿವರ: ಮಂಗಳವಾರ ಮುಂಜಾನೆಯವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಅತ್ಯುತ್ತಮ ಅಂದರೇ ಸರಾಸರಿ 143.36 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 147.20 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 182.20 ಮಿ.ಮೀ. ಮತ್ತು ಕುಂದಾಪುರ ತಾಲೂಕಿನಲ್ಲಿ 100.70 ಮಿ.ಮೀ. ಮಳೆ ದಾಖಲಾಗಿದೆ.