ಡೆಂಘೀ ಹೆಚ್ಚಳ: ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗೆ ಆಗ್ರಹ
ಉಡುಪಿ: ಜಿಲ್ಲೆಯ ತೆಂಕನಿಡಿಯೂರು, ತೋನ್ಸೆ ಗ್ರಾಮ ಸೇರಿದಂತೆ ಅನೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಡೆಂಘೀ ರೋಗದ ಪ್ರಕರಣಗಳು ಬೆಳಕಿಗೆ ಬಂದಿದ್ದು, ರೋಗ ಪೀಡಿತರಿಗೆ ಕೂಡಲೇ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲೇ ಸೂಕ್ತ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಬಹುಜನ ಸಮಾಜಪಕ್ಷದ ಜಿಲ್ಲಾ ಮುಖಂಡ ಪ್ರಶಾಂತ್ ತೊಟ್ಟಂ ಆಗ್ರಹಿಸಿದ್ದಾರೆ.
ಜಿಲ್ಲೆಯ ಹಲವು ಭಾಗಗಳಲ್ಲಿ ಡೆಂಘೀ ರೋಗ ಕಾಣಿಸಿಕೊಂಡಿದ್ದು ಈಗಾಗಲೇ ಅನೇಕರು ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ ಶುರುವಾದ ತಕ್ಷಣ ರೋಗಿ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋದರೆ ಆಸ್ಪತ್ರೆಯಲ್ಲಿ ಸ್ಪಂದಿಸದೆ ಚಿಕಿತ್ಸೆ ನಿರಾಕರಿಸಿ, ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರೋಗ ಯಾವ ಗ್ರಾಮಗಳಲ್ಲಿ ಉಲ್ಬಣಿಸುತ್ತದೆಯೋ ಅಲ್ಲಿ ಡೆಂಘೀ ಹರಡದಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಬೇಕು, ಈಗಾಗಲೇ ಡೆಂಘೀ ಕಾಣಿಸಿಕೊಂಡಿರುವ ಪ್ರದೇಶಗಳಿಗೆ ತಾ.ಪಂ., ಜಿ.ಪಂ. ಸದಸ್ಯರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸದಸ್ಯರು ಭೇಟಿ ನೀಡದಿರುವುದು ಇವರಿಗಿರುವ ಜನಪರ ಕಾಳಜಿ ಏನೆಂಬುದನ್ನು ತೋರಿಸುತ್ತದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿ, ಹೆಚ್ಚುವರಿ ಸೌಲಭ್ಯ ಕಲ್ಪಿಸಿ, ಕೂಡಲೇ ಎಲ್ಲಾ ರೋಗಗಳಿಗೂ ಇಲ್ಲಿಯೇ ಚಿಕಿತ್ಸೆ ದೊರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬೃಹತ್ ಜನಾಂದೋಲನ ರೂಪಿಸುವುದಾಗಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.