ದಕ್ಷಿಣ ಕನ್ನಡ: ಸಂಜೆ ಉತ್ತಮ ಮಳೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಧಾರಾಕಾರ ಮಳೆ ಕಾಣಿಸಿಕೊಂಡಿದೆ. ಹಗಲು ಹೊತ್ತು ಬಿಡುವಾಗಿದ್ದ ಮಳೆ ಸಂಜೆಯಾಗುತ್ತಿದ್ದಂತೆ ಜಿಟಿಜಿಟಿಯಾಗಿ ಸುರಿಯಲಾರಂಭಿಸಿತು. ಬೆಳಗ್ಗಿನಿಂದ ಸಂಜೆ ವರೆಗೆ ಆಗಾಗ ಮೋಡದ ಮರೆಯಿಂದ ಬಿಸಿಲು ಇಣುಕಿದರೂ ಮಳೆ ಬಂದಿರಲಿಲ್ಲ. ಮಧ್ಯಾಹ್ನ ಒಂದು ಕ್ಷಣ ಮಳೆ ಹನಿದುಹೋದರೂ, ತಂಪಗಿನ ವಾತಾವರಣ ನೆಲೆಸಿತ್ತು. ಸಂಜೆ ಎಡೆಬಿಡದೆ ಕೆಲಹೊತ್ತು ಮಳೆಯಾಗಿತ್ತು ಚರಂಡಿ ಭರ್ತಿಯಾಗಿ ನೀರು ಉಕ್ಕಿ ಹರಿಯುತ್ತಿತ್ತು. ಬುಧವಾರ ಬೆಳಗ್ಗಿನವರೆಗೆ ಬಂಟ್ವಾಳದಲ್ಲಿ ಗರಿಷ್ಠ 59 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ದಿನ ಜಿಲ್ಲೆಯಲ್ಲಿ ಒಟ್ಟು 70 ಮಿ.ಮೀ ಮಳೆಯಾಗಿದ್ದರೆ, ಈ ಬಾರಿ ಇದೇ ದಿನ 38.4 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಕಳೆದ ಬಾರಿಗಿಂತ(486.8 ಮಿ.ಮೀ) ಗರಿಷ್ಠ ಮಳೆ(950 ಮಿ.ಮೀ)ದಾಖಲಾಗಿದೆ.
ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯ ಪಂಪ್ಹೌಸ್ನಲ್ಲಿ ಮಧ್ಯಾಹ್ನ ತಂತಿ ಕಡಿದು ವಿದ್ಯುತ್ ಹಾಗೂ ನೀರು ಪೂರೈಕೆಗೆ ಅಡಚಣೆಯಾಗಿತ್ತು. ಸಂಜೆ ವೇಳೆಗೆ ಇದನ್ನು ದುರಸ್ತಿ ಮಾಡಲಾಯಿತು. ಬಂಟ್ವಾಳ 59 ಮಿ.ಮೀ, ಬೆಳ್ತಂಗಡಿ-28.4 ಮಿ.ಮೀ, ಮಂಗಳೂರು-49.1 ಮಿ.ಮೀ, ಪುತ್ತೂರು-33.3 ಮಿ.ಮೀ, ಸುಳ್ಯ-22.4 ಮಿ.ಮೀ ಮಳೆ ದಾಖಲಾಗಿದೆ. ಬಂಟ್ವಾಳ ನೇತ್ರಾವತಿ ನದಿ 4 ಮೀಟರ್, ಉಪ್ಪಿನಂಗಡಿ ನೇತ್ರಾವತಿ ನದಿ ಹಾಗೂ ಉಪ್ಪಿನಂಗಡಿ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಮಟ್ಟ ತಾಲಾ 18 ಮೀಟರ್ ಇದೆ ಎಂದು ಜಿಲ್ಲಾಡಳಿತ ವರದಿ ತಿಳಿಸಿದೆ.