ಅಪಾಯ ಆಹ್ವಾನಿಸುತ್ತಿವೆ ಇಂಗುಗುಂಡಿಗಳು
ಕಾರ್ಕಳ: ತಾಲೂಕಿನಲ್ಲಿ ಜಲಾನಯನ ಯೋಜನೆಯಡಿ ನಿರ್ಮಾಣಗೊಂಡಿರುವ ಇಂಗುಗುಂಡಿಗಳು ಮಳೆಗಾಲದಲ್ಲಿ ಅನಾಹುತಕ್ಕೆ ಎಡೆಮಾಡಿಕೊಡುತ್ತಿದೆ. ಆದರೂ, ಸಂಬಂಧಪಟ್ಟ ಇಲಾಖೆ ಮಾತ್ರ ತಡೆಬೇಲಿ ನಿರ್ಮಾಣ ಮಾಡದೆ ಮೌನವಹಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ನೀರಿನ ಸಂರಕ್ಷಣೆ ನಿಟ್ಟಿನಲ್ಲಿ ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶದ ಕೃಷಿ ಪ್ರಧಾನ ಭೂಮಿ ಹಾಗೂ ಹಾಡಿಯಲ್ಲಿ ಸರ್ಕಾರ ಜಲಾನಯನ ಇಲಾಖೆ ಮುಖಾಂತರ ಕಳೆದ ಮೂರು ವರ್ಷಗಳಿಂದ ಇಂಗುಗುಂಡಿ ನಿರ್ಮಾಣ ಮಾಡುತ್ತಿದೆ. ಆದರೆ ಇಂಗುಗುಂಡಿ ನಿರ್ಮಾಣ ಉದ್ದೇಶ ಒಳ್ಳೆಯದ್ದಾಗಿದರೂ, ಯೋಜನೆ ಮಾತ್ರ ಸದ್ಬಳಕೆ ಆಗದೆ ಇದು ಮರಣಕೂಪವಾಗಿ ಮಾರ್ಪಟ್ಟಿದೆ. ಮಳೆಗಾಲ ಸಮಯದಲ್ಲಿ, ಅದರಲ್ಲೂ ಪುಟ್ಟ ಮಕ್ಕಳು ಬಿದ್ದು ಮೃತಪಟ್ಟ ಪ್ರಕರಣಗಳು ನಡೆಯುತ್ತಲೇ ಇವೆ.
ವರ್ಷದ ಹಿಂದೆಯಷ್ಟೇ ಸಾಣೂರು ಗ್ರಾಮದಲ್ಲಿ ತಡೆಬೇಲಿ ಇಲ್ಲದ ಇಂಗುಗುಂಡಿಗೆ ಶಾಲಾ ವಿದ್ಯಾರ್ಥಿ ಬಿದ್ದು ಮೃತಪಟ್ಟ ಘಟನೆ ನಡೆದಿತ್ತು.
ಇಂತಹದ್ದೇ ಇಂಗುಗುಂಡಿಯಲ್ಲಿ ಇತ್ತೀಚೆಗೆ ರೆಂಜಾಳ ದ ಯುವತಿ ಪೂರ್ಣಿಮಾ ಎಂಬಾಕೆಯನ್ನು ಕೊಂದ ಘಟನೆಯೂ ನಡೆದಿದೆ.