ಮಳೆ-ಬಿಸಿಲು ಕಣ್ಣಾಮುಚ್ಚಾಲೆ
ಉಡುಪಿ: ಜಿಲ್ಲೆಯಲ್ಲಿ ಕಳೆದ 2-3 ದಿನಗಳಲ್ಲಿ ರಾತ್ರಿ ಹೊತ್ತು ಪ್ರಾರಂಭವಾಗುವ ಮಳೆ ಬೆಳಗ್ಗೆ ಸುಮಾರು 8 - 9 ಗಂಟೆಯವರೆಗೂ ಸುರಿದು ನಂತರದಲ್ಲಿ ಒಳ್ಳೆಯ ಬಿಸಿಲು ಆವರಿಸಿಕೊಳ್ಳುತ್ತಿದೆ. ಈಗಾಗಲೇ ಕೃಷಿ ಚಟುವಟಿಕೆಗಳನ್ನು ಆರಂಭಿಸಿರುವ ಜನರು ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಬೇಸತ್ತು ಹೋಗಿದ್ದಾರೆ. ಗುರುವಾರವು ಬೆಳಗ್ಗೆಯವರೆಗೂ ಮುಂಗಾರಿನ ಆರ್ಭಟ ಜೋರಾಗಿದ್ದು ನಂತರ ಬಿಸಿಲು ಆವರಿಸಿತ್ತು.
ಹಲವೆಡೆ ಕಡಲ್ಕೊರೆತ: ಉಡುಪಿಯಲ್ಲಿ ಮಟ್ಟು ಗ್ರಾಮದ ಹಲವಾರು ಕಡೆ ಕಡಲ್ಕೊರೆತ ಉಂಟಾಗಿದೆ. ಟಿ. ವಿ. ರಾವ್ ಮನೆ ಹತ್ತಿರ ಸುಮಾರು 50 ಮೀ. ವರೆಗೆ, ವಡ್ಡಾರ ಕಾಲನಿಯ ಸಮೀಪ 100 ಮೀ.ವರೆಗೆ, ರಾಮಪ್ಪ ಮನೆಯ ಹತ್ತಿರ 50 ಮೀ.ವರೆಗೆ ಕಡಲ್ಕೊರೆತ ಉಂಟಾಗಿದೆ.
ಜಿಲ್ಲೆ ಮಳೆ ವಿವರ: ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಸರಾಸರಿ 26.40 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 23 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 43.80 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 12.40 ಮಿ.ಮೀ. ಮಳೆ ದಾಖಲಾಗಿದೆ.