ಅತ್ಯಾಚಾರಿಗಳಿಗೆ ಅಪಮಾನದ ಶಿಕ್ಷೆ ವಿಧಿಸಿ: ಪೇಜಾವರ ಶ್ರೀ
ಉಡುಪಿ: ಅತ್ಯಾಚಾರಿಗಳಿಗೆ ತೀವ್ರ ಅಪಮಾನವಾಗುವ ಮತ್ತು ನೋವಾಗುವ ಶಿಕ್ಷೆ ವಿಧಿಸಬೇಕೆಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅತ್ಯಾಚಾರಿಗಳಿಗೆ ತೀವ್ರವಾಗಿ ನೋವಾಗುವ ಮತ್ತು ಸಮಾಜದಲ್ಲಿ ತಲೆ ಎತ್ತಿ ಓಡಾದಷ್ಟು ಅವಮಾನವಾಗುವಂತಹ ಶಿಕ್ಷೆ ವಿಧಿಸಬೇಕು. ಆಗ ಅದು ಎಲ್ಲರಿಗೂ ಒಂದು ಪಾಠ ಆಗುತ್ತದೆ. ಅತ್ಯಾಚಾರ ಮಾಡಿದರೆ ಕಠಿಣ ಶಿಕ್ಷೆ ಆಗುತ್ತದೆ ಎಂದು ಹೆದರಿಕೆಯಿಂದ ಅತ್ಯಾಚಾರದಂಥ ಪ್ರಕರಣಗಳು ಕಡಿಮೆ ಆಗಬಹುದು. ದೆಹಲಿಯಲ್ಲಿ ಮತ್ತು ದೇಶದ ಬೇರೆ ಬೇರೆ ಕಡೆಗಳಲ್ಲಿ ಅತ್ಯಾಚಾರ ಪ್ರಕರಣ ನಡೆದಾಗ ತೀವ್ರ ಬೇಸರವಾಗಿತ್ತು. ಈಗ ನಮ್ಮೂರಿನಲ್ಲಿಯೇ ಇಂಥ ಘಟನೆ ನಡೆದಿದೆ ಎನ್ನುವುದನ್ನು ಕೇಳಿದಾಗ ಅಚ್ಚರಿಯೂ ಆಗುತ್ತಿದೆ, ತೀವ್ರ ನೋವಾಗುತ್ತಿದೆ. ಈ ಹಿಂದೆಯೂ ಇಂಥ ಘಟನೆಗಳು ನಡೆದಿವೆ. ಆಗ ಮಾಧ್ಯಮಗಳಿಲ್ಲದ್ದರಿಂದ ವರದಿಯಾಗುತ್ತಿರಲಿಲ್ಲ. ಈಗ ಮಾಧ್ಯಮಗಳು ಎಚ್ಚೆತ್ತುಕೊಂಡಿವೆ. ಆದ್ದರಿಂದ ಇಂಥ ಘಟನೆಗಳು ಬಯಲಾಗುತ್ತಿವೆ ಎಂದರು.